4500 ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆಯ ಸಮಯದಲ್ಲಿತ್ತು ಅದ್ಭುತ ಒಳಚರಂಡಿ ವ್ಯವಸ್ಥೆ!

ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆಂದು ಬೀಗುತ್ತಿರುವ ನಮ್ಮ ನಗರಗಳು ಒಂದೇ ಒಂದು ಮಳೆಗೆ ಮುಳುಗಿ ಹೋಗುತ್ತಿವೆ. ರಾಷ್ಟೀಯ ಹೆದ್ದಾರಿಗಳೆಲ್ಲಾ ನದಿಯಂತಾಗಿ ರಸ್ತೆ ಮೇಲೆ ಸರಾಗವಾಗಿ ಓಡಾಡಬೇಕಾದ ವಾಹನಗಳು ಆಮೆಯಂತೆ ನಿಧಾನವಾಗಿ ಈಜುತ್ತಾ ಸಾಗುವಂತಾಗಿದೆ. ಕೆರೆ, ಕಾಲುವೆಗಳನ್ನೆಲ್ಲಾ ಒತ್ತುವರಿ ಮಾಡಿ, ರಸ್ತೆ ನಿವೇಶನಗಳನ್ನು ನಿರ್ಮಿಸುವಾಗ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನೇ ಮಾಡದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಕಟ್ಟಡ ನಿರ್ಮಾಣಗಳನ್ನು ಮಾಡಿದ್ದರ ಪರಿಣಾಮ ಇಂದು ಹಳ್ಳಿ ನಗರಗಳೆನ್ನದೆ ಎಲ್ಲರನ್ನೂ ಕಾಡುತ್ತಿದೆ.

ಬೆಳ್ಳಂದೂರು

ಇಂತಹ ನಾವು ಕನಿಷ್ಠ 4-5 ಸಾವಿರ ವರ್ಷಗಳ ಇತಿಹಾಸವಿರುವ ಭಾರತದ ಸಿಂಧೂ ನಾಗರಿಕತೆಯ ಪ್ರದೇಶಗಳನ್ನೊಮ್ಮೆ ನೋಡಿ ಬರಬೇಕು. ಸರಸ್ವತಿ-ಸಿಂಧೂ ನಾಗರಿಕತೆಯ ಪ್ರದೇಶದ ಮೊದಲನೆ ಪದರಗಳನ್ನು ಮಾತ್ರ ಉತ್ಖನನ ಮಾಡಲಾಗಿದೆ. ಉತ್ಖನನ ಆಳವಾದಂತೆ ಇತಿಹಾಸದ ಕಾಲಮಾನದಲ್ಲಿ ನಾವು ಹಿಂದಕ್ಕೆ ಸಾಗುತ್ತಾ ಹೋಗುತ್ತೇವೆ. ಪ್ರಪಂಚದ ಅತ್ಯಂತ ಸುವ್ಯವಸ್ಥಿತ ನಗರ ಪ್ರದೇಶಗಳನ್ನು ಹೊಂದಿದ್ದ ನಾಗರಿಕತೆಯೆಂದರೆ ಅದು ಸರಸ್ವತಿ-ಸಿಂಧೂ ನದಿ ಬಯಲಿನ ನಾಗರಿಕತೆ.

ಸಿಂಧೂ ಕಣಿವೆಯಲ್ಲಿ ಸುವ್ಯವಸ್ಥಿತ ಒಳಚರಂಡಿ ವ್ಯವಸ್ಥೆ

ಮೊಹೆಂಜೋ-ದಾರೋ

ಸಿಂಧೂ ಕಣಿವೆಯ ನಾಗರೀಕತೆಯ ಅವಧಿಯಲ್ಲಿನ ಅವರ ನಗರ ಯೋಜನೆಯ ಅತ್ಯಂತ ವಿಶಿಷ್ಟವಾದ ಅಂಶವೆಂದರೆ ಭೂಗತ ಒಳಚರಂಡಿ ವ್ಯವಸ್ಥೆ! 1.5 ಮೀಟರ್ ಆಳ ಮತ್ತು 91 ಸೆಂಮೀ ಅಗಲದ ಮುಖ್ಯ ಒಳಚರಂಡಿಯು ಅನೇಕ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಒಳಚರಂಡಿಗಳಿಗೆ ಸಂಪರ್ಕ ಹೊಂದಿದ್ದವು. ಇವುಗಳನ್ನು ನುಣುಪಾದ ಇಟ್ಟಿಗೆಗಳಿಂದ ತಯಾರಿಸಿ, ತಡೆರಹಿತವಾಗಿ ಜೋಡಿಸಿಕೊಂಡು ಹೋಗಲಾಗಿತ್ತು. ಅಂದಿನ ಪರಿಣಿತ ಮೇಸ್ತ್ರಿಗಳು ಚರಂಡಿಯಲ್ಲಿ ನೀರು ನಿಲ್ಲದಂತೆ ಅದನ್ನು ನಿರ್ಮಿಸಿದ್ದರು. ನಿಯಮಿತ ಮಧ್ಯಂತರಗಳಲ್ಲಿ ಸ್ವಯಂಚಾಲಿತ ಶುಚಿಗೊಳಿಸುವ ಸಾಧನದಂತೆ ಕಾರ್ಯನಿರ್ವಹಿಸುವ ತಂತ್ರಜ್ಞಾನಾಧರಿತ ಒಳಚರಂಡಿ ವ್ಯವಸ್ಥೆಗಳಿದ್ದವು. ಚರಂಡಿಗಳ ಕೊನೆಯಲ್ಲಿ ಮರದ ಪರದೆಯು ಘನ ತ್ಯಾಜ್ಯವನ್ನು ಹಿಡಿದಿಟ್ಟುಕೊಳ್ಳುತ್ತಿತ್ತು!

ಲೋಥಲ್

ತ್ರಿಜ್ಯೀಯ ಇಟ್ಟಿಗೆಗಳಿಂದ ಮಾಡಲಾದ ಆಕಾರದೊಳಗೆ ದ್ರವ ಹರಿದುಹೋಗುತ್ತಿತ್ತು. ಸುರಂಗಗಳು ದ್ರವ ತ್ಯಾಜ್ಯಗಳನ್ನು ಧಕ್ಕೆಯನ್ನು ನದೀಮುಖದೊಂದಿಗೆ ಸಂಪರ್ಕಿಸುವ ಮುಖ್ಯ ಕಾಲುವೆಗೆ ಸಾಗಿಸುತ್ತಿದ್ದವು. ಸಾಮಾನ್ಯ ಮನೆಗಳಲ್ಲಿ ಭೂಗತ ಹೀರುವ ಜಾಡಿಗಳೊಳಗೆ ಖಾಲಿಯಾಗುವ ಸ್ನಾನಗೃಹಗಳು ಮತ್ತು ಒಳಚರಂಡಿಗಳು ಇದ್ದವು. ಬೀದಿಗಳಲ್ಲೆಲ್ಲಾ ಮುಚ್ಚಿದ ಚರಂಡಿ ವ್ಯವಸ್ಥೆಗಳಿದ್ದವು.

ಮೊಹೆಂಜೋ-ದಾರೋ

ಕನಿಷ್ಠವೆಂದರೂ 5 ಸಾವಿರ ವರ್ಷಗಳ ಹಿಂದಿನಿಂದಲೂ ನಮ್ಮಲ್ಲಿ ಕಟ್ಟಡ ಮತ್ತು ರಸ್ತೆ ನಿರ್ಮಾಣದ ಅತ್ಯಂತ ಮುಂದುವರಿದ ಜ್ಞಾನ ಮತ್ತು ತಂತ್ರಜ್ಞಾನಗಳಿದ್ದರೂ, ಇಂದು ನಮ್ಮ ನಗರಗಳು ಗಟಾರದ ನೀರಿನಲ್ಲಿ ಮುಳುಗುತ್ತಿರುವುದು, ರಸ್ತೆಗಳಲ್ಲಿ ಸೊಂಟ ಮಟ್ಟ ನೀರು ತುಂಬಿಕೊಳ್ಳುತ್ತಿದೆ. ತಾಂಡವವಾಡುತ್ತಿರುವ ಭ್ರಷ್ಟಾಚಾರ, ಕಳಪೆ ಕಾಮಗಾರಿಯಿಂದಾಗಿ ಕೃತಕ ನೆರಗಳು ಸಾಮಾನ್ಯವೆಂಬಂತಾಗಿದೆ.

ಸಿಂಧೂ ಕಣಿವೆ

5000 ವರ್ಷಗಳ ಹಿಂದೆ ಒಂದೇ ಒಂದು ಎಂಜಿನಿಯರಿಂಗ್ ಕಾಲೇಜು ಇಲ್ಲದಿದ್ದರೂ ಅದ್ಭುತವೆನಿಸುವಂತಹ ನಗರಗಳನ್ನು ನಿರ್ಮಿಸಿದ ಆ ಕಾಲವೊಂದಿತ್ತು. ವಾರ್ಷಿಕವಾಗಿ ಹದಿನೈದು ಲಕ್ಷ ಇಂಜಿನಿಯರಿಂಗ್ ಪದವೀಧರರನ್ನು ಉತ್ಪಾದಿಸುವ, ತಾಂತ್ರಿಕ ಶಿಕ್ಷಣ ಮೂಲಸೌಕರ್ಯಕ್ಕಾಗಿ 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್‌ಗಳು ಮತ್ತು 200 ಯೋಜನೆ ಮತ್ತು ವಾಸ್ತುಶಿಲ್ಪ ಶಾಲೆಗಳನ್ನು ಒಳಗೊಂಡಿದ್ದರೂ ಇಂದು ನಮ್ಮ ಸ್ಮಾರ್ಟ್ ನಗರಗಳು ಮಳೆಯಲ್ಲಿ ಮುಳುಗಿ ಹೋಗುತ್ತಿವೆ! ಸಿಂಧೂ ನಾಗರಿಕತೆಯ ನಗರ ನಿರ್ಮಾಣದ ಅದ್ಭುತ ಕೌಶಲ್ಯದಿಂದ ನಾವು ಕಲಿಯುವುದು ಸಾಕಷ್ಟಿದೆ.

ಮಾಹಿತಿ ಮತ್ತು ಚಿತ್ರ ಕೃಪೆ: ಹರಪ್ಪಾ.ಕಾಮ್