ಕುಂದಾಪುರ: ನದಿ-ಕಡಲು ನಡುವಿನ ಅಪೂರ್ವ ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ಗುರುವಾರ ಜನಜಾತ್ರೆ ಮೇಳೈಸಿತು. ಬೆಳಗ್ಗಿನ ಜಾವ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಮುದ್ರ ಹಾಗೂ ನದಿಯಲ್ಲಿ ಸ್ನಾನ ಮಾಡಿದ ಬಳಿಕ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು.
ದೇವಸ್ಥಾನ ಪ್ರವೇಶಿಸಲು ಕಾದಿದ್ದವರ ಸರತಿಯ ಸಾಲು ಬಹುದೂರದವರೆಗೂ ವ್ಯಾಪಿಸಿತು. ನವವಿವಾಹಿತ ಜೋಡಿಗಳು, ಕೃಷಿಕರು, ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.
ಮರವಂತೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ ಹೆಬ್ಬಾರ್, ಸದಸ್ಯರು ಅರ್ಚಕ- ಉಪಾದಿವಂತರು, ಸ್ವಯಂಸೇವಕರು ದೇವಾಲಯದೊಳಗೆ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರು. ಬಂದವರೆಲ್ಲ ದೇವರ ದರ್ಶನ ಮಾಡಿ, ಹಣ್ಣುಕಾಯಿ, ಕಾಣಿಕೆ ಸಮರ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಕಿರಿಮಂಜೇಶ್ವರ, ಸೋಮೇಶ್ವರದಲ್ಲೂ ಸಹಸ್ರಾರು ಜನರು ದೇವರ ದರ್ಶನ ಪಡೆದರು.
ಮೀನುಗಾರರ ನೆಚ್ಚಿನ ಕ್ಷೇತ್ರ:
ಅರಬ್ಬೀ ಸಮುದ್ರ ಹಾಗೂ ಸೌಪರ್ಣಿಕ ನದಿಯ ನಡುವಲ್ಲಿರುವ ಪುಣ್ಯ ಕ್ಷೇತ್ರ ವರಾಹ ದೇವಸ್ಥಾನ ಸುತ್ತಮುತ್ತಲಿನ ಮೀನುಗಾರರು ಅತೀ ಹೆಚ್ಚು ನಂಬಿರುವ ಕ್ಷೇತ್ರವಾಗಿದೆ. ಯಾವುದೇ ಸಮಸ್ಯೆಗಳು ಬಂದಾಗ ವರಾಹ ದೇವರ ದರ್ಶನ ಪಡೆದೇ ಮುಂದುವರಿಯುವುದು ಇಲ್ಲಿಯ ವಾಡಿಕೆ.
ಸಮುದ್ರ, ನದಿ ಸ್ನಾನ ವಿಶೇಷ:
ಕರ್ಕಾಟಕ ಅಮವಾಸ್ಯೆಯಂದು ಇಲ್ಲಿಗೆ ಬರುವ ಭಕ್ತರು ಸಮುದ್ರ ಮತ್ತು ದೇವಸ್ಥಾನದ ಎದುರಿನ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ನಂಬಿಕೆ ಬಹಳ ವಿಶಿಷ್ಟವಾದದು. ದೀವಿಗೆ(ಕರ್ಕಾಟಕ)ಅಮವಾಸ್ಯೆಯಂದು ಇಲ್ಲಿ ಬಂದು ಸಮುದ್ರ ಸ್ನಾನ ಮಾಡಿದರೆ ರೋಗಗಳನ್ನು ವರಾಹ ಸ್ವಾಮಿ ಪರಿಹರಿಸುತ್ತಾನೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಇನ್ನು ಕರ್ಕಾಟಕ ಅಮವಾಸ್ಯೆಯ ವಿಶೇಷ ಆಚರಣೆಯೆಂದರೆ ನೂತನವಾಗಿ ವಿವಾಹವಾದ ನವ ದಂಪತಿಗಳು ಇಲ್ಲಿಗೆ ಆಗಮಿಸಿ ಸಮುದ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.
ಪೊಲೀಸ್ ಬಿಗು ಬಂದೋಬಸ್ತ್:
ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್ ಗುನಗಾ, ಬೈಂದೂರು ಠಾಣೆಯ ಠಾಣಾಧಿಕಾರಿ ತಿಮ್ಮೇಶ್ ಬಿಎನ್, ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ್ ಸಿಬ್ಬಂದಿಗಳನ್ನೊಳಗೊಂಡ ಪೊಲೀಸರ ತಂಡ ದೇವಸ್ಥಾನದ ಒಳಗೆ ಹಾಗೂ ಹೊರಗಡೆ ಜನದಟ್ಟಣೆಯನ್ನು ನಿಯಂತ್ರಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.