ನಾನು ಯಾವುದಕ್ಕೂ ಬಗ್ಗಲ್ಲ, ಜಗ್ಗಲ್ಲ; ರಾಜೀನಾಮೆಯ ಒತ್ತಾಯಕ್ಕೂ ಹೆದರಲ್ಲ: ಮತ್ತೆ ಸಿಎಂ ವಿರುದ್ಧ ಗುಡುಗಿದ ಈಶ್ವರಪ್ಪ

ಮೈಸೂರು: ನನ್ನ ಇಲಾಖೆಯಲ್ಲಿ ನಡೆಯುತ್ತಿರುವ ಕೆಲಸಗಳು ನನಗೆ ಗೊತ್ತಾಗಬೇಕು. ನಾನು ಪೋಸ್ಟ್ ಮ್ಯಾನ್ ಅಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹೇಳಿದೆ. ಅದಕ್ಕೆ ಅವರು ತಮ್ಮ ಕಡೆಯಿಂದ ತಪ್ಪಾಗಿದೆ ಎಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ಸಲ್ಲಿಸಿದದ್ದರು. ಇದರ ಬೆನ್ನಲ್ಲೇ ಕೆಲವು ಸಚಿವರು ಹಾಗೂ ಶಾಸಕರು ಈಶ್ವರಪ್ಪನವರ ವಿರುದ್ಧ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ನನ್ನ ಗಮನಕ್ಕೆ ತಾರದೆ ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ. ಅದರ ಬಗ್ಗೆ ನನಗೆ ಅಸಮಾಧಾನ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಇಲಾಖೆಯ ಕೆಲಸಗಳಿಗೆ ನಿಯಮಾನುಸಾರ ಅನುದಾನ ನೀಡಲಿ. ಆದರೆ ನನ್ನ ಗಮನಕ್ಕೆ ಬಾರದೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಒಂದಕ್ಕೇ 65 ಕೋಟಿ ಬಿಡುಗಡೆ ಮಾಡಿದ್ದಾರೆ. ಹೀಗೆ ವಿವಿಧ ಕಾಮಗಾರಿ, ಇಲಾಖೆಯ ಕೆಲಸಗಳಿಗೆಂದು ಒಟ್ಟು 1,291 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ ಎಂದರು.

ನಾನು ರೆಬೆಲ್ ಅಲ್ಲ, ಲಾಯಲ್: ಸಿಎಂ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಪತ್ರ ಬರೆದಿದ್ದೇನೆಯೇ ಹೊರತು ಇದರಲ್ಲಿ ವೈಯಕ್ತಿಕ ಕಾರಣಗಳಿಲ್ಲ. ಸಿಎಂ ವಿರುದ್ಧ ರೆಬೆಲ್ ಆಗಲ್ಲ, ನಾನು ಲಾಯಲ್. ಬಿಜೆಪಿ ಪಕ್ಷ ನನಗೆ ತಾಯಿ ಇದ್ದ ಹಾಗೆ, ನಾನು ಸೇರಿದಂತೆ ನಾಲ್ವರು ಸಚಿವರು, ಶಾಸಕರು ನನಗೆ ಸಹಮತ ನೀಡಿದ್ದಾರೆ. ರಾಜಿನಾಮೆ ಕೇಳಿದ್ದಾರೆ, ಖಾತೆ ಬದಲಾವಣೆ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇವಾವುದಕ್ಕೂ ಬಗ್ಗುವುದಿಲ್ಲ ಎಂದು ಸಿಎಂ ವಿರುದ್ಧ ಮತ್ತೆ ಗುಡುಗಿದರು.