ಉಡುಪಿ: ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಾನು ಕಟಿಬದ್ದನಾಗಿದ್ದು, ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಬೇಕಾಗಿರುವ ಎಲ್ಲಾ ರೀತಿಯ ಸಹಾಯ ಮಾಡಲು ಸದಾ ಸಿದ್ದನಾಗಿದ್ದೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಹೇಳಿದರು.
ಅವರು ಗುರುವಾರದಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ರಜತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿಗೆ ಎರಡನೆ ಬಾರಿ ಬಂದಿರುತ್ತೇನೆ. ದೇವತೆಗಳ ಭೂಮಿಯಾದ ಉಡುಪಿಗೆ ಭೇಟಿ ನೀಡಿದ ಮೇಲೆ ಮನಸ್ಸು ಪ್ರಸನ್ನವಾಗುತ್ತದೆ. 13 ನೇ ಶತಮಾನಕ್ಕೂ ಹಿಂದಿನ ದೇವಸ್ಥಾನಗಳು ಇಲ್ಲಿವೆ. ಈ ದೇವಸ್ಥಾನಗಳು ಕರ್ನಾಟಕ, ದೇಶ ಮಾತ್ರವಲ್ಲ ವಿಶ್ವದಲ್ಲೂ ಪ್ರಸಿದ್ದಿ ಪಡೆದಿವೆ. ಉಡುಪಿಯ ಪ್ರಾಕೃತಿಕ ಸೌಂದರ್ಯ, ಸಾಮರಸ್ಯ, ಮಂದಿರ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆ, ಕಲೆ ಎಲ್ಲವೂ ವಿಶ್ವ ಪ್ರಸಿದ್ದವಾಗಿದೆ. ಧರ್ಮ ಸಂಸ್ಕೃತಿಯ ಈ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವ ಎಲ್ಲ ಜನಪ್ರತಿನಿಧಿಗಳು ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ ಎನ್ನುವ ತತ್ವದಡಿ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. 25 ವರ್ಷಗಳಲ್ಲಿ ಜನ ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವ ಮತ್ತು ಸಹಯೋಗದಿಂದಾಗಿ ಉಡುಪಿ ವೇಗವಾಗಿ ಅಭಿವೃದ್ದಿ ಹೊಂದಿದೆ. ಉಡುಪಿ ಪ್ರಗತಿಯ ಪಥದಲ್ಲಿದೆ, ಇದೇ ರೀತಿ ವಿಕಾಸ ಹೊಂದುತ್ತಿದ್ದರೆ ರಾಜ್ಯದಲ್ಲೇ ಪ್ರಗತಿ ಹೊಂದಿರುವ ಜಿಲ್ಲೆಯಾಗಲಿದೆ. ಉಡುಪಿ ಜಿಲ್ಲೆಯ ಮೂರ್ತಿ ಕಲೆಯ ಅದ್ಭುತ ಉದಾಹರಣೆಗಳನ್ನು ಇಲ್ಲಿ ಕಾಣಬಹುದು. ತುಳುನಾಡಿನ ಜನರಲ್ಲಿ ಕಾರ್ಯತತ್ಪರತೆ ಮತ್ತು ನಾಯಕತ್ವ ಗುಣ ಇದೆ. ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಅಧಿಕವಿರುವುದು ಉಡುಪಿಯಲ್ಲಿ ಮಾತ್ರ. ಉಡುಪಿಯನ್ನು ಪ್ರವಾಸೋದ್ಯಮ ಸಂಪನ್ನ ಜಿಲ್ಲೆಯಾಗಿಸುವಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕು, ಜಿಲ್ಲೆಯ ವಿಕಾಸಕ್ಕಾಗಿ ತನ್ನಿಂದ ಏನೇ ಸಹಾಯ ಬೇಕಿದ್ದರೂ ಸಹಾಯ ಮಾಡಲು ತತ್ಪರನಾಗಿದ್ದೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಇಂದು ನನಗೆ ಹೆಮ್ಮೆ ಮತ್ತು ಸಂತೋಷದ ದಿವಸ. ಈ ದಿನ ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್, ಡಾ.ವಿ.ಎಸ್. ಆಚಾರ್ಯ,ಬಿ.ಎಂ ಮೊಯ್ದೀನ್, ಎಂ.ಪಿ ಪ್ರಕಾಶ್ ಅವರನ್ನು ಸ್ಮರಿಸುತ್ತೇನೆ. ಮೊದಲನೆ ಉಸ್ತುವಾರಿ ಸಚಿವನಾಗಿದ್ದಾಗಿನ ಆ ಸಮಯದಿಂದ ಈ ಸಮಯದವರೆಗೆ ಉಡುಪಿಯು ಅಭಿವೃದ್ದಿ ಹೊಂದಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಉಡುಪಿಯು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆಯಾಗಿರಬಹುದು ಆದರೆ ಅವಿಭಜಿತ ದ.ಕ ಈಗಲೂ ಅದೆ. ನಾವು ಭೌಗೋಳಿಕತೆಯಿಂದ ಬೇರೆಯಾಗಿದ್ದೇವೆ ಆದರೆ ಚೈತನ್ಯ ಮತ್ತು ಸಂಸ್ಕೃತಿಯಿಂದ ಒಂದುಗೂಡಿದ್ದೇವೆ. ಜನರ ಸಹಕಾರದಿಂದ ಜನಪ್ರತಿನಿಧಿಯಾಗಿ ಚುನಾಯಿತನಾದದ್ದರಿಂದ ಜಿಲ್ಲೆ ನಿರ್ಮಾಣ ಕಾರ್ಯ ಸಾಧ್ಯವಾಯಿತು. ಈ ಸನ್ಮಾನವೆಲ್ಲ ಜನರಿಗೆ ಸಲ್ಲಬೇಕು. ಇತಿಹಾಸ-ವರ್ತಮಾನಗಳ ಸರಿಯಾದ ಯೋಚನೆಗಳಿಂದ ಭವಿಷ್ಯದ ಯೋಜನೆಗಳನ್ನು ಮಾಡಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, 25 ವರ್ಷಗಳ ಹಿಂದೆಯೂ ಉಡುಪಿ ಸಮೃದ್ಧವಾಗಿತ್ತು. ಹಿರಿಯರು ಜಿಲ್ಲೆಯಿಂದ ಮೂರು ಬ್ಯಾಂಕ್ ಗಳಾದ ಸಿಂಡಿಕೇಟ್, ಕೆನರಾ ಮತ್ತು ಕಾರ್ಪೋರೇಷನ್ ಬ್ಯಾಂಕ್ ಗಳನ್ನು ಕಟ್ಟಿದ್ದರು. ಅಂತರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳನ್ನು ತಯಾರಿಸಲು ಮಣಿಪಾಲ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲೇ ಹೋದರೂ ಉಡುಪಿ ಜಿಲ್ಲೆಯ ಅತಿಥಿ ಸತ್ಕಾರ ಮತ್ತು ಹೋಟೇಲ್ ಉದ್ಯಮದ ಬಗ್ಗೆ ಮಾತು ಕೇಳಿ ಬರುತ್ತದೆ. ಉಡುಪಿ ಜಿಲ್ಲೆಯ ನಿರ್ಮಾಣಕ್ಕಾಗಿ ಹೋರಾಡಿದ ಮತ್ತು ಜಿಲ್ಲೆಯ ನಿರ್ಮಾಣದಲ್ಲಿ ಸಹಾಯಮಾಡಿದ ಎಲ್ಲರನ್ನೂ ಸ್ಮರಿಸುತ್ತೇನೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ರಘುಪತಿ ಭಟ್, ಇಂದು ಹಬ್ಬದ ವಾತಾವರಣವಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಅಷ್ಟಮಿಯ ಸಂಭ್ರಮದ ಮಧ್ಯೆ ಜೆ.ಎಚ್ ಪಟೇಲರಿಂದ ಜಿಲ್ಲೆ ಉದ್ಘಾಟನೆಯಾಯಿತು. ಇಪ್ಪತ್ತೈದು ವರ್ಷಗಳ ನಂತರವೂ ಅದೇ ಸಂಭ್ರಮವಿದೆ. ಜಿಲ್ಲೆಯ ಪ್ರಥಮ ಉಸ್ತುವಾರಿ ಸಚಿವರಾದ ಜಯಪ್ರಕಾಶ್ ಹೆಗ್ದೆ, ಮತ್ತು ಪ್ರಥಮ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಐಎಎಸ್ ಐ.ಪಿ.ಎಸ್ ಅಧಿಕಾರಿಗಳನ್ನು ಕರೆದು ವಿಶೇಷ ಕಾರ್ಯಕ್ರಮ ಮಾಡಲಾಗುವುದು.
ಕಾರ್ಯಕ್ರಮ ಕೇವಲ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗದೆ, ಜಿಲ್ಲೆ ಮುಂದಿನ ದಿನಗಳಲ್ಲಿ ಹೇಗೆ ಅಭಿವೃದ್ದಿ ಕಾಣಬೇಕು ಎನ್ನುವ ಬಗ್ಗೆ ವಿಚಾರ ಮಂಥನಗಳನ್ನು ಆಯೋಜಿಸುವ ಯೋಜನೆಗಳಿವೆ. ಭಾರತ ನೂರು ವರ್ಷದ ಸ್ವಾತಂತ್ರ್ಯವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಉದುಪಿ 50 ವರ್ಷಗಳನ್ನು ಪೂರೈಸಲಿದೆ. ಆ ಸಂದರ್ಭದಲ್ಲಿ ಉಡುಪಿ ದೇಶದಲ್ಲೇ ಅತ್ಯಂತ ಅಭಿವೃದ್ದಿ ಹೊಂದಿದ ಶಾಂತಿಯುತವಾದ ಮಾದರಿ ಜಿಲ್ಲೆಯಾಗಿಸಲು ಬೇಕಾದ ಕಾರ್ಯತಂತ್ರಗಳನ್ನು ಮಾಡಲು ಜನವರಿ 25 ರವರೆಗೆ ಕಾರ್ಯಕ್ರಮವನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರುಗಳನ್ನು ಆಹ್ವಾನಿಸಲಿದ್ದೇವೆ. ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗೌರವದ ವಿಚಾರ ಎಂದರು. ಉಡುಪಿಯ ಅಭಿವೃದ್ದಿಯ ವಿಚಾರ ಬಂದಾಗ ಡಾ.ವಿ.ಎಸ್.ಆಚಾರ್ಯರವರ ನೆನೆಪು ಬಂದೇ ಬರುತ್ತದೆ. ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಜಿಲ್ಲೆ ಕಂಡಿದೆ ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯಿಲಿ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ.ಆರ್.ಮೆಂಡನ್, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನಪರಿಷತ್ ಶಾಸಕರುಗಳಾದ ಆಯನೂರು ಮಂಜುನಾಥ, ಮಂಜುನಾಥ ಭಂಡಾರಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಯು.ಆರ್.ಸಭಾಪತಿ ಹಾಗೂ ಜಿಲ್ಲೆ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ ಶ್ರೀಮತಿ ಜಿ ಕಲ್ಪನಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸಿ.ಇ.ಒ ಪ್ರಸನ್ನ ಹೆಚ್ ವಂದಿಸಿದರು. ಶಂಕರ್ ಪ್ರಕಾಶ್ ನಿರೂಪಿಸಿದರು.
ಸಂಜೆ ಸರಿಗಮಪ ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಬೃಹತ್ ಜನಸ್ತೋಮ ಸಂಗೀತಗಾರರ ಸಂಗೀತಕ್ಕೆ ಹೆಜ್ಜೆ ಹಾಕಿ ಕುಣಿದದ್ದು ವಿಶೇಷವಾಗಿತ್ತು.












