ಆ.1-2: ಮೂಡುಬಿದಿರೆಯಲ್ಲಿ ʼಆಳ್ವಾಸ್ ಪ್ರಗತಿ -2025 ಬೃಹತ್ ಉದ್ಯೋಗ ಮೇಳʼ

ಮಂಗಳೂರು: ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಅಯೋಜಿಸಲ್ಪಡುತ್ತಿರುವ ಹದಿನೈದನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಆಗಸ್ಟ್ 1 ಹಾಗೂ 2 ರಂದು ಮೂಡಬಿದ್ರೆಯ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2007ರಲ್ಲಿ ಪ್ರಾರಂಭವಾದ ಅಳ್ವಾಸ್ ಪ್ರಗತಿ- ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸುವಲ್ಲಿ ಶ್ರೇಷ್ಠವೇದಿಕೆಯಾಗಿ ಜನಮಾನಸದಲ್ಲಿ ಹೆಸರುವಾಸಿಯಾಗಿದೆ ಎಂದರು.

ಸಂಸ್ಥೆಯು ಈವರೆಗೆ ದೇಶದ ವಿವಿಧ ಭಾಗಗಳಲ್ಲಿ 21 ಬೃಹತ್ ಉದ್ಯೋಗ ಮೇಳಗಳನ್ನು ಬಹಳ ವ್ಯವಸ್ಥಿ ತವಾಗಿ ನಡೆಸಿದೆ. ಪ್ರತೀ ಉದ್ಯೋಗ ಮೇಳದಲ್ಲಿ ಸರಾಸರಿ 200ರಷ್ಟು ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡು. ಇಲ್ಲಿವರೆಗೆ ಒಟ್ಟು 36,151 ಉದ್ಯೋಗಗಳನ್ನು ನೀಡಿದೆ. 61,517 ಅಭ್ಯರ್ಥಿಗಳು ವಿವಿಧ ಕಂಪೆನಿಗಳ ಶಾರ್ಟ್‌ಲಿಸ್ಟ್‌ನಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಾರಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ , ಡಿಪ್ಲೋಮಾ ಪಿಯುಸಿ, ಎಸ್ಸೆಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ವಿವರಿಸಿದರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ www.alvaspragati.com ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ಅಲ್ಲದೆ ಆಳ್ವಾಸ್ ಸಂಸ್ಥೆಯ ಪರಿಣತ ತಂಡದಿಂದ ‘ಆಳ್ವಾಸ್ ಪ್ರಗತಿ’ಯಲ್ಲಿ ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನ ಕೌಶಲ್ಯಗಳ ತರಬೇತಿಯನ್ನು ವಿವಿಧ ಭಾಗಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.

*ಉತ್ತಮ ಉದ್ಯೋಗಾವಕಾಶಗಳ ಮಹಾಪೂರ: ಆಳ್ವಾಸ್ ಪ್ರಗತಿಗೆ ಈವರೆಗೆ 80 ಕಂಪೆನಿಗಳು ನೋಂದಾಯಿಸಿಕೊಂಡಿದ್ದು ಮತ್ತು ಹೆಚ್ಚುವರಿಯಾಗಿ ಈಗಾಗಲೇ 130 ಕಂಪೆನಿಗಳು ಪಾಲ್ಗೊಳ್ಳುವ ಮೌಖಿಕ ಭರವಸೆ ನೀಡಿವೆ. ಒಟ್ಟು 300 ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜುಲೈ 31ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗು ವುದು ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ 9741440490, 9611750531, 7975223865 ಅನ್ನು ನೊಂದಾವಣೆ ಹಾಗೂ ಉದ್ಯೋಗ ನೀಡಲಿರುವ ಕಂಪೆನಿಗಳ ಮಾಹಿತಿಗೆ www.alvaspragati.com ಅಥವಾ 9731953123 , ಅಭ್ಯರ್ಥಿಗಳು ಉದ್ಯೋಗ ಮೇಳದಂದು ಬೆಳಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‌ನ್‌ನಲ್ಲಿ ಹಾಜರಿರಬೇಕು. ಡಾ. ಎಂ. ಮೋಹನ್ ಆಳ್ವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಅಳ್ಳ, ತರಬೇತಿ ಹಾಗೂ ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.