ಆಳ್ವಾಸ್ ನಲ್ಲಿ ವಾರ್ಷಿಕ ಚಿತ್ರಕಲಾ ಪ್ರದರ್ಶನ ”ಆರ್ಟಿಫೈಸ್”

ಮೂಡಬಿದ್ರೆ: ಯಾವ ಶಿಕ್ಷಣ ಸಂಸ್ಥೆ ಕಲೆಯನ್ನು ಪ್ರೋತ್ಸಾಹಿಸುತ್ತದೆಯೋ ಆ ಸಂಸ್ಥೆ ಒಳ್ಳೆಯ ಕಲಾವಿದನನ್ನು ಸೃಷ್ಠಿಸುತ್ತದೆ. ಕಲಾಸಕ್ತ ವಿದ್ಯಾರ್ಥಿಗಳಿಗೆ ಉನ್ನತ ಅವಕಾಶಗಳು ಸಿಕ್ಕಾಗಲೆಲ್ಲ ಅವರಿಗೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಆಳ್ವಾಸ್ ಕಾಲೇಜಿನ ಮಾನೇಜ್ಮೆಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ವಿಷುವಲ್ ಆಟ್ಸ್ ವಿಭಾಗದ ವತಿಯಿಂದ ಮಾರ್ಚ ೧೧ ರಿಂದ ೧೪ ವರೆಗೆ ನಡೆಯಲಿರುವ ವಾರ್ಷಿಕ ಚಿತ್ರಕಲಾ ಪ್ರದರ್ಶನ ”ಆರ್ಟಿಫೈಸ್”ನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಚಿತ್ರಕಲಾ ಪ್ರದರ್ಶನಗಳು ಮುಂದೊಂದು ದಿನ ಕಲಾತ್ಮಕ ಕಲಾವಿದನ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ವಿದ್ಯಾರ್ಥಿಗಳು ಇಲ್ಲಿಂದಲೇ ತಮ್ಮ ಸೃಜನಾಶೀಲತೆಯನ್ನು ಪೋಷಿಸುತ್ತಾ ಹೋಗಬೇಕು ಎಂದರು.

ವಿಷುವಲ್ ಆರ್ಟ್ಸನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಯಲ್ಲಿ ಆದಾಯದ ಮೂಲಗಳನ್ನು ಆರಿಸಿಕೊಳ್ಳಬೇಕು. ಆ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುರಿಯನ್ ತಿಳಿಸಿದರು.

ಉದ್ಘಾಟನೆಯ ನಂತರ ವಿದ್ಯಾರ್ಥಿಗಳು ರಚಿಸಿದ ಪೈಯ್ಟಿಂಗ್, ಪೆನ್ಸಿಲ್ ಸ್ಕೆಚ್, ಮಸಿಯಿಂದ ಬಿಡಿಸಿದ ಚಿತ್ರಗಳು, ಲೋಗೋ, ಕ್ಯಾಲಿಗ್ರಫಿ, ಮಾತ್ರವಲ್ಲದೆ ಜೇಡಿ ಮಣ್ಣು, ಫೈಬರ್, ಸ್ಟೀಲ್, ಕಟ್ಟಿಗೆಗಳನ್ನು ಬಳಸಿ ನಿರ್ಮಿಸಿದ ವರ್ಣರಂಜಿತ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥ ಶರತ್ ಶೆಟ್ಟಿ ಶಿಕ್ಷಕರಾದ ವಿಪಿನ್‌ಲಾಲ್, ವಿಶ್ವನಾಥ ಎಂ, ವಿದ್ಯಾರ್ಥಿ ಸಂಯೋಜಕ ಸಾತ್ವಿಕ್ ಎನ್.ಬಿ ಮತ್ತು ತಿಲಕ್ ಉಪಸ್ಥಿತರಿದ್ದರು.

ಏನ್ ವಿಶೇಷ?
ನಾಲ್ಕು ದಿನಗಳ ಕಾಲ ನಡೆಯುವ ಚಿತ್ರಕಲಾ ಪ್ರದರ್ಶನವು ನಾಲ್ಕು ಮಹಡಿಗಳಲ್ಲಿ ವ್ಯಾಪಿಸಿದ್ದು, ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ. ಆಸಕ್ತರಿಗೆ ವಸ್ತು ಪ್ರದರ್ಶನದಲ್ಲಿರುವ ವಸ್ತುಗಳ ಖರೀದಿಗೂ ಅವಕಾಶವಿದೆ.  ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಮೆಂಟ್, ವುಡ್, ಡಿಜಿಟಲ್ ಮೀಡಿಯಾ,ಫೋಟೋಗ್ರಫಿ, ಕೋಲೆಜ್ ಮೇಕಿಂಗ್ ಇವೇ ಮುಂತಾದ ಮಾಧ್ಯಮಗಳ ಮೂಲಕ ವಸ್ತು ಪ್ರದರ್ಶನ ನಡೆಸಲಾಯಿತು.
ವಿದ್ಯಾರ್ಥಿಗಳು ೫೪ ಸ್ಟಾಲ್‌ಗಳ ಮುಖಾಂತರ ಪ್ರದರ್ಶನ ನಡೆಸಿದರು
ಉಪಯೋಗಕ್ಕೆ ಬಾರದ ಸಿಮೆಂಟಿನಿಂದ ರಚಿಸಿದ ಮೀನಿನ ಆಕೃತಿಯ ಚೈನೀಸ್ ಆರ್ಟ್, ವಿದ್ಯಾರ್ಥಿ ವಿಷ್ಣು ಪ್ರಶಾಂತ ಕಲಾಕುಂಚದಲ್ಲಿ ಮೂಡಿದ ”ಕನಸು” ಎಂಬ ಕಲಾಕೃತಿ, ಶಿವತಾಂಡವ, ಗೋವರ್ಧನ ಗಿರಿ ಹೀಗೆ ಹಲವು ರಚನೆಗಳು ಮುಖ್ಯ ಆಕರ್ಷಣೆಯಾಗಿದ್ದವು.