ಮೂಡಬಿದ್ರಿ: ಸ್ವಂತಿಕೆ ಇದ್ದರೆ ಜಗತ್ತಿನಲ್ಲಿ ಬದುಕುವ ದಾರಿಗಳು ಹಲವು. ಇನ್ನೊಬ್ಬರನ್ನು ಅನುಕರಣೆ ಮಾಡದೆ ಬದುಕುವುದು ಹೇಗೆ ಎಂಬುದನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷ ಸ್ವಾಮಿ ವಿವೇಕಾನಂದರು ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಸರ್ವಧರ್ಮ ಸಮ್ಮೇಳನದ ಭಾಷಣಕ್ಕೆ ೧೨೫ನೇ ವರ್ಷದ ಪ್ರಯುಕ್ತ ರಾಮಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡ ‘ವಿಶ್ವ ವಿಜೇತ’ ಕಾರ್ಯಕ್ರಮದಲ್ಲಿ ಮಾತನಾಡಿದರು..
ಸ್ವಾಮಿ ವಿವೇಕಾನಂದರ ನೆನಪಿನ ಶಕ್ತಿಗೆ ಕಾರಣ ಬ್ರಹ್ಮಚರ್ಯ. ಮನಸ್ಸಿನ ಪರಿಶುದ್ಧತೆ ಕಾಪಾಡಿದರೆ ಏಕಾಗ್ರತೆ ಮನೆಮಾಡುತ್ತದೆ. ಅಶಿಕ್ಷಿತರೇ ಹೆಚ್ಚಿದ್ದ ಭಾರತದ ಆ ತಲೆಮಾರಿನಲ್ಲಿ ಸಂಸ್ಕೃತ ವನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ತಮ್ಮ ಶಿಷ್ಯಂದಿರು ತಮ್ಮನ್ನು ಹಿಂಬಾಲಿಸಕೂಡದೆಂಬ ಕಾರಣಕ್ಕೆ ಹೆಸರನ್ನೇ ಬದಲಾಯಿಸಿಕೊಂಡು, ಒಬ್ಬಂಟಿಯಾಗಿ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆಯ ಸಂಕಲ್ಪ ತೊಟ್ಟ ‘ಡೈನಾಮಿಕ್ ಸಂತ’ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೋ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ನಾತಕೋತ್ತರ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರ್ಶ ಕಾರ್ಯಕ್ರಮವನ್ನು ನಿರೂಪಿಸಿದರು.