ಆಳ್ವಾಸ್ ಕಾಲೇಜಿನಲ್ಲಿ ‘ಬಯೊ-ಕೈಮೆರಾ’- ಹ್ಯಾಂಡ್ಸ್ ಆನ್ ಕಾರ್ಯಾಗಾರ

ಮೂಡಬಿದ್ರೆ : ನಾವು ಪ್ರಯೋಗಾತ್ಮಕವಾಗಿ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರಲ್ಲಿ ಬಯೊಕೆಮಿಸ್ಟ್ರಿಯ ಎಲ್ಲಾ ವಿಷಯಗಳು ನಿಂತಿವೆ ಎಂದು ಆಳ್ವಾಸ್ ಕಾಲೇಜಿನ ಇನ್‌ವೆನ್ಶಿಯೋ ರಿಸರ್ಚ್ ಕ್ಲಬ್‌ನ ಸಂಯೋಜಕ ಡಾ. ಸುಕೇಶ್ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಯೋಕೆಮಿಸ್ಟ್ರಿ ವಿಭಾಗ ಆಯೋಜಿಸಿದ ‘ಬಯೊ-ಕೈಮೆರಾ’- ಹ್ಯಾಂಡ್ಸ್ ಆನ್ ವರ್ಕಶಾಫ್‌ನಲ್ಲಿ ಅವರು ಮಾತನಾಡಿದರು.
ಸಂಶೋಧನೆ ಆರಂಭವಾಗುವುದೇ ನಮ್ಮ ಸುತ್ತ ಮುತ್ತಲಿನ ಪ್ರಕೃತಿಯಲ್ಲಿ. ಸಂಶೋಧನೆ ಗುಣಾತ್ಮಕವಾಗಿರಬೇಕೆಂದರೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೂಲಕ ಸಮರ್ಥಿಸಿಕೊಳ್ಳಬೇಕು, ಆಗ ಮಾತ್ರ ಪ್ರಯೋಗ ಸಾಫಲ್ಯ ಕಾಣುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಂಶೋಧನೆಗಳು ಪ್ರಯೋಗಾತ್ಮಕವಾದಾಗ ಮಾತ್ರ ಅದು ಜ್ಞಾನವಾಗುತ್ತದೆ. ಬಯೊಕೆಮಿಸ್ಟ್ರಿ ಮನುಷ್ಯನ ಬದುಕನ್ನು ತುಂಬಾ ಬದಲು ಮಾಡುವ ಸಾಧ್ಯತೆಗಳುಳ್ಳ ವಿಷಯ, ಆದರೇ ಸಂಶೋಧನಾತ್ಮಕವಾಗಿ ಅವೆಲ್ಲವೂ ಸಾಬೀತಾಗಬೇಕು ಎಂದರು.

ಈ ಸಂದರ್ಭ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಯೊಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಉಷಾ ಬಿ. ರಾವ್ ಉಪಸ್ಥಿತರಿದ್ದರು.  ವಿದ್ಯಾರ್ಥಿನಿಗಳಾದ ಸೌಂದರ್ಯ ಸ್ವಾಗತಿಸಿ, ಯುಕ್ತಾ ವಂದಿಸಿದರು. ಶ್ರೀನಿಧಿ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.