ಆಳ್ವಾಸ್ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ವರ್ಣರಂಜಿತ ತೆರೆ

ಮೂಡಬಿದಿರೆ: ಕ್ರೀಡಾ ವಿಜೇತರಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜಿಸುವಂತಹ ಮಹಾತ್‌ಕಾರ್ಯ ಆಳ್ವಾಸ್ ವಿದ್ಯಾಸಂಸ್ಥೆ ಮಾಡುತ್ತಿರುವುದು ವಿಶೇಷ ಹಾಗೂ ಸ್ತುತ್ಯರ್ಹ ಎಂದು ಮಾಜಿ ಒಲಿಂಪಿಕ್ ಕ್ರೀಡಾಪಟು ಪಿ.ಟಿ.ಉಷಾ ಹೇಳಿದರು.

ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿರ್ವಸಿಟಿಯ ಸಹಭಾಗಿತ್ವದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ೮೦ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆಳ್ವಾಸ್ ಸಂಸ್ಥೆಯು ಸಮಯ ಪ್ರಜ್ಞೆ ಮತ್ತು ಶಿಸ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದು, ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾಪಟುಗಳಿಗೆ ವಸತಿ, ಊಟೋಪಚಾರ, ವೈದ್ಯಕೀಯ ಸೇವೆ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಿಭಾಯಿಸಲಾಗುತ್ತಿದ್ದು, ಕ್ರೀಡಾಪಟುಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದೆ ಎಂದರು.

 


ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶದ ನಾನಾ ಭಾಗದ ೪೦೦ ವಿಶ್ವವಿದ್ಯಾಲಯಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಬಹುದೊಡ್ಡ ಸಾಧನೆಯಾಗಿದೆ. ದೇಶದ ಯಾವುದೇ ವಿಶ್ವವಿದ್ಯಾಲಯ ಮಾಡದ ಸಾಧನೆ ಮಂಗಳೂರು ವಿಶ್ವವಿದ್ಯಾಲಯ ಮಾಡಿದ್ದು ಹೆಮ್ಮೆಯ ಸಂಗತಿ. ಕೇವಲ ಶಿಕ್ಷಣ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾತ್ರ ಪ್ರಾಶಸ್ತ್ಯ ನೀಡದೆ ಕ್ರೀಡಾ ರಂಗದಲ್ಲಿಯೂ ಕೂಡ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹುರಿದುಂಬಿಸುತ್ತಿದೆ. ಜತೆಗೆ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ್ ಆಳ್ವ ವಿಜೇತರಿಗೆ ಗೌರವ ಧನ ನೀಡಿ ಪ್ರೋತ್ಸಾಹಿಸಿ ಕ್ರೀಡಾಪಟುಗಳಿಗೆ ಇನ್ನಷ್ಟು ಸ್ಫೂರ್ತಿ ತುಂಬಿದ್ದಾರೆ ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಮಾಜಿ ಒಲಂಪಿಕ್ ಕ್ರೀಡಾಪಟು ಪಿ.ಟಿ. ಉಷಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ರೀಡಾಕೂಟದ ಆಯೋಜನೆಗೆ ಹಾಗೂ ಸಹಕಾರಕ್ಕಾಗಿ ಅಂತರ್ ವಿಶ್ವವಿದ್ಯಾಲಯದ ಪಟಿಯಾಲದ ಪಂಜಾಬಿ ಯೂನಿರ್ವಸಿಟಿ, ಕ್ಯಾಲಿಕಟ್ ಯೂನಿರ್ವಸಿಟಿ, ಅಮೃತ್ ಸರ್ ಗುರುನಾನಕ್ ಯುನಿರ್ವಸಿಟಿ, ಮಹಾರಾಜ್ ಯೂನಿರ್ವಸಿಟಿ, ಕೊಟ್ಟಾಯಂನ ಎಮ್.ಜಿ. ಯೂನಿರ್ವಸಿಟಿ ಸೇರಿದಂತೆ ಮಂಗಳೂರು ವಿಶ್ವವಿದ್ಯಾಲಯದ ತರಬೇತುದಾರರನ್ನು ಹಾಗೂ ವ್ಯವಸ್ಥಾಪಕರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಬಿ.ವಸಂತ ಶೆಟ್ಟಿ, ಅಸೋಸಿಯೇಶನ್ ಆಫ್ ಇಂಡಿಯನ್ ಯುನಿವರ್ಸಿಟಿಯ ವೀಕ್ಷಕ ಡಾ.ಚರಣಜೀತ್ ಸಿಂಗ್ ಹಾಗೂ ಹಿರಿಯ ಕ್ರೀಡಾಪಟು ಬಾಬುಶೆಟ್ಟಿ ಉಪಸ್ಥಿತರಿದ್ದರು.