ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಸಮಾಜದ ದೃಷ್ಟಿ ಬದಲಾಗಬೇಕು-ಸಿ.ಎಂ. ಜೋಷಿ

ಉಡುಪಿ: ಸಮಾಜದಲ್ಲಿ ಇರುವ ಎಲ್ಲರಿಗೂ ಕಾನೂನು ಅನ್ವಯವಾಗುತ್ತದೆ. ಆದರೂ ನಮ್ಮ ಸಮಾಜದಲ್ಲಿ ಅನೇಕ ಓರೆಕೋರೆಗಳಿದ್ದು, ಇದನ್ನು ಸರಿಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಸಮಾಜದ ದೃಷ್ಟಿ ಬದಲಾಗಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ಹೇಳಿದರು.

ಅವರು ಬುಧವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘ (ರಿ)ಉಡುಪಿ, ಆಶ್ರಯ ಸಮುದಾಯ ಸಂಘಟನೆ(ರಿ) ಹಾಗೂ ಸಾರಥ್ಯ ಪಯಣ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾದ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರಿಗಾಗಿ ಜಿಲ್ಲಾ ಮಟ್ಟದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ, ಆದರೆ ಸಮಾಜದಲ್ಲಿ ಕೆಲವೊಂದು ಸಮುದಾಯಗಳು ಮತ್ತು ಜನರಿಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕಾನೂನಿನ ಅರಿವು ನೀಡಬೇಕಿದೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಹಿಂದೆ ಅರ್ಜಿ ನಮೂನೆಗಳಲ್ಲಿ ಪುರುಷ ಹಾಗೂ ಮಹಿಳೆ ಎಂದು ಮಾತ್ರ ನಮೂದಿಸಲಾಗುತಿತ್ತು. ಪ್ರಸ್ತುತ ಅರ್ಜಿ ನಮೂನೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರಲ್ಲಿ ಮಾಹಿತಿ ಕೊರತೆಯಿದ್ದು, ತರಬೇತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗುರುತಿನ ಚೀಟಿ, ಆರೋಗ್ಯ ಕಾರ್ಡ್‍ಗಳಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಮಾತನಾಡದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಐವರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಎಸ್‍ಪಿ ಕುಮಾರ್‍ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್. ಗೊನ್ಸಾಲ್ವಿಸ್, ಸಾರಥ್ಯ ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷ ಪೆದ್ದಣ್ಣ, ಆಶ್ರಯ ಸಮುದಾಯ ಸಂಘಟನೆ (ರಿ.) ನ ಸಂಜೀವ ವಂಡ್ಸೆ, ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಹೋರಾಟಗಾರ ತ್ರಿಮೂರ್ತಿ ಉಪಸ್ಥಿತರಿದ್ದರು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಂತೋಷ್ ಸ್ವಾಗತಿಸಿದರು.