ಸಣ್ಣ ಪುಟ್ಟ ಅಂಗಡಿಗಳಿಗೂ ಪರ್ಯಾಯ ದಿನಗಳಲ್ಲಿ ತೆರೆಯಲು ಅವಕಾಶ ನೀಡಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮನವಿ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕ್ರಮ ಶ್ಲಾಘನೀಯವಾದರೂ ಕಳೆದ ೫೦ ದಿನಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾದ ನಿರ್ಬಂಧಗಳಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸುವುದು ಕಷ್ಟವಾಗಿದೆ. ಬಟ್ಟೆ ಮಳಿಗೆಗಳಲ್ಲಿ ಹಾಗೂ ಇನ್ನಿತರ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನೌಕರಿಯಿಲ್ಲದೆ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದು ಕಷ್ಟಕರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಸಾಮಾನ್ಯ ಜನರನ್ನೂ ಗಮನದಲ್ಲಿಟ್ಟುಕೊಂಡು ಈಗಾಗಲೇ ಕೆಲವು ವ್ಯಾಪಾರಗಳಿಗೆ ವಿನಾಯಿತಿ ನೀಡಲಾಗಿದ್ದು ಇನ್ನುಳಿದ ಸಣ್ಣ ಪುಟ್ಟ ಅಂಗಡಿ ಮಾಲಿಕರು ವ್ಯಾಪಾರ ಸ್ಥಗಿತಗೊಂಡು ಯಾವ ರೀತಿ ಜೀವನ ನಿರ್ವಹಣೆ ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದ್ದಾರೆ. ಅವರು ನೆಮ್ಮದಿಯಿಂದ ಜೀವನ ನಡೆಸುವಂತಾಗುವ ನಿಟ್ಟಿನಲ್ಲಿ ಆಯ್ದ ಇತರ ಅಗತ್ಯ ವಸ್ತುಗಳ ಅಂಗಡಿಗಳಿಗೆ ಪರ್ಯಾಯ ದಿನಗಳಂತೆ ತೆರೆಯಲು ಅನುಮತಿ ನೀಡಿ ದಿನನಿತ್ಯದ ವ್ಯಾಪಾರವನ್ನೇ ಅವಲಂಬಿತ ಕುಟುಂಬಗಳಿಗೆ ಅನುಕೂಲವಾಗುವಂತೆ ವಿನಾಯ್ತಿ ನೀಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ