ಹೆರ್ಗ ಗ್ರಾಮದಲ್ಲಿ 106 ಫಲಾನುಭವಿಗಳಿಗೆ ಮನೆ ಹಂಚಿಕೆ

ಶಾಸಕ ಕೆ. ರಘುಪತಿ ಭಟ್ ಅವರ ಮಹತ್ವಾಕಾಂಕ್ಷೆಯ ಯೋಜನೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ “ಸರ್ವರಿಗೂ ಸೂರು ಕಾರ್ಯಕ್ರಮ” ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ 460 ಮನೆಗಳನ್ನು ಒಳಗೊಂಡ ವಸತಿ ಸಮುಚ್ಛಯ ನಿರ್ಮಿಸಲಾಗುತ್ತಿದೆ.

ಇದಕ್ಕೆ ಅರ್ಜಿ ಹಾಕಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ದ್ವಿತೀಯ ಹಂತದಲ್ಲಿ 106 ಮನೆಗಳ ಹಂಚಿಕೆ ಚೀಟಿ ಎತ್ತುವ ಮೂಲಕ ನಡೆಯಿತು.

ಸರಳಬೆಟ್ಟು ಬಬ್ಬುಸ್ವಾಮಿ ಲೇಔಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವ ವಸತಿ ಸಮುಚ್ಛಯದ 460 ಮನೆಗಳಲ್ಲಿ ಮೊದಲ ಹಂತದಲ್ಲಿ 240 ಮನೆಗಳನ್ನು ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲಾಗಿತ್ತು. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ನೆಲೆಯಡಿ ನೆಲ ಮಹಡಿಯ ಮನೆಗಳನ್ನು ಲಾಟರಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಳೀಯ ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಸಂತೋಷ್ ಜತ್ತನ್, ಗಿರಿಧರ್ ಆಚಾರ್ಯ, ಭಾರತಿ ಪ್ರಶಾಂತ್, ರಜನಿ ಹೆಬ್ಬಾರ್, ನಗರ ಆಶ್ರಯ ಸಮಿತಿ ಸದಸ್ಯರಾದ ಮುರಳಿ ಭಟ್ ಹಾಗೂ ಪ್ರೊಫೆಷನರಿ ಐ.ಎ.ಎಸ್ ಯತೀಶ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನ ಕುಮಾರ್, ನಗರ ಸಭೆಯ ಸಮುದಾಯ ಸಂಘಟನಾಧಿಕಾರಿ ನಾರಾಯಣ್ ಎಸ್.ಎಸ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.