ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪರಿಸರದಲ್ಲಿ ದಶಕದ ಹಿಂದೆ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ನ್ಯಾಯ ಸಿಗಲಿಲ್ಲ ಎಂದು ಹನ್ನೊಂದು ವರ್ಷಗಳ ಬಳಿಕ ಇತ್ತೀಚೆಗೆ ಕೆಲವು ದಿನಗಳಿಂದ ಮತ್ತೆ ಈ ಪ್ರಕರಣ ಮುನ್ನೆಲೆಗೆ ಬಂದಿದೆ.
ನಾವು ಸೌಜನ್ಯಾ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹಲವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆ ನಡೆಸುತ್ತಿರುವುದಾಗಿ ಉಡುಪಿ ಜಿಲ್ಲೆಯ ಪತ್ರಕರ್ತ ವಸಂತ್ ಗಿಳಿಯಾರ್ ಎನ್ನುವವರು, ದಕ್ಷಿಣಕನ್ನಡ ಜಿಲ್ಲೆಯ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಎನ್ನುವವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಈ ಮಧ್ಯೆ ಉಡುಪಿ ಜಿಲ್ಲೆಯ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಎಂಬವರು ಪತ್ರಕರ್ತ ವಸಂತ್ ಗಿಳಿಯಾರ್ ವಿರುದ್ಧ ಆರೋಪ ಮಾಡಿದ್ದಾರೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪತ್ರಿಕೆಯಲ್ಲಿ 2016 ರಲ್ಲಿ ವಸಂತ್ ಗಿಳಿಯಾರ್ ಐದು ಲಕ್ಷ ರೂ. ಪಡೆದಿದ್ದರು. ಅಲ್ಲದೆ ಆ ವರದಿ ಇದ್ದ ಪತ್ರಿಕೆ ಇನ್ನೊಬ್ಬರಿಗೆ ತಲುಪಿಸಿದ್ದೂ ಗೊತ್ತು ಎಂದು ದಿನೇಶ್ ಗಾಣಿಗ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ನಡೆದ ಸಂಘರ್ಷ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕೆರೆ ನಾಗಬನ ಹಾಗೂ ಯಕ್ಷಿ ಸನ್ನಿಧಾನದಲ್ಲಿ ಇವರಿಬ್ಬರು ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಿದ್ದು, ಇಬ್ಬರಲ್ಲಿ ಯಾರು ಸರಿ ಎಂದು ದೇವರೇ ತೋರಿಸಲಿ ಎಂದು ಕೇಳಿಕೊಂಡಿದ್ದಾರೆ.


















