ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಚರ್ಚ್ ಮುಂಭಾಗದಲ್ಲಿ ನಡೆಯುತ್ತಿರುವ ಪ್ರಾಂಗಣ ವಿಸ್ತರಣೆಯ ಕಾಮಗಾರಿ ನಡೆಯುತ್ತಿರುವ ಸ್ಥಳವು ಸರಕಾರಿ ಜಾಗವಾಗಿದ್ದು, ಕಂದಾಯ ಅಧಿಕಾರಿಗಳು ತಕ್ಷಣವೇ ಚರ್ಚ್ ಸುತ್ತಮುತ್ತಲಿನ ಸ್ಥಳದಲ್ಲಿ ಗಡಿ ಗುರುತಿಸಬೇಕು ಹಾಗೂ ಸರಕಾರಿ ಜಾಗವನ್ನು ಸಂರಕ್ಷಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯು ಕಾರ್ಕಳ ತಹಶೀಲ್ದಾರ್ ನರಸಪ್ಪ ಇವರಿಗೆ ಜ. 8 ರಂದು ಮನವಿ ಸಲ್ಲಿಸಿದೆ.
ಚರ್ಚ್ ನಡೆಸುವ ಜಾತ್ರೆಗೆ ಅಡ್ಡಿಇಲ್ಲ. ಆದರೆ ಮುಂದಿನ ಎರಡು ವಾರದ ಒಳಗೆ ಆಕ್ರಮಿತ ಸರಕಾರಿ ಜಾಗಗಳಲ್ಲಿ ಗಡಿ ಗುರುತು ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಇರುವ ಕಾರ್ಯಕರ್ತರನ್ನು ಒಗ್ಗೂಡಿಸಿ ತೀವ್ರ ಹೋರಾಟ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರಕಾಶ್ ಕುಕ್ಕೆ ಹಳ್ಳಿ, ಗುರುಪ್ರಸಾದ್ ನಾರಾವಿ, ಶ್ರೀಕಾಂತ್ ಶೆಟ್ಟಿ, ಪ್ರಶಾಂತ್ ನಾಯಕ್, ಸತ್ಯೇಂದ್ರ ಭಟ್, ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಸುಭಾಷ್ ಹೆಗ್ಡೆ, ರಮೇಶ್ ಶೆಟ್ಟಿ ತೆಳ್ಳಾರ್, ರಮೇಶ್ ಕಲ್ಲೊಟ್ಟೆ, ಸಂತೋಷ್ ಕುಕ್ಕದಕಟ್ಟೆ, ರಾಘವೇಂದ್ರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.