ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಆಯೋಗ ರಚನೆಗೆ ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ

ಅಲಹಾಬಾದ್: ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಕೃಷ್ಣ ದೇವಸ್ಥಾನದ ಪ್ರದೇಶದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದ್ದು, ಈ ಬಗ್ಗೆ ಹಿಂದೂ ಪರ ಅರ್ಜಿದಾರರು ದೇವಾಲಯ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಮಾಡಲು ಅನುಮತಿ ಕೋರಿ ಅಲಹಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಹಿ ಈದ್ಗಾ ಮಸೀದಿ ಸಂಕೀರ್ಣವನ್ನು ಪರಿಶೀಲಿಸಲು ಆಯೋಗವನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಅಂಗೀಕರಿಸಿದೆ.

ಅರ್ಜಿದಾರರ ಪರ ವಕೀಲ ರಂಜನಾ ಅಗ್ನಿಹೋತ್ರಿ ಮಾಧ್ಯಮದ ಜೊತೆ ಮಾತನಾಡಿ, ಸ್ಥಳವನ್ನು ಸಮೀಕ್ಷೆ ಮಾಡಲು ಆಯೋಗವನ್ನು ನೇಮಿಸಬೇಕೆಂಬ ನಮ್ಮ ಮನವಿಯನ್ನು ನ್ಯಾಯಾಲಯವು ಅನುಮತಿಸಿದೆ. ಆದೇಶವನ್ನು ಅಪ್‌ಲೋಡ್ ಮಾಡಿದ ಬಳಿಕ ಹೆಚ್ಚಿನ ವಿವರಗಳು ಹೊರಬರಲಿವೆ ಎಂದಿದ್ದಾರೆ.

ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲಾಗಿದೆ ಎನ್ನುವ ಐತಿಹ್ಯಗಳಿವೆ. ಹಿಂದೂ ದೇವಾಲಯವನ್ನು ಕೆಡವಿ ಈದ್ಗಾ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಗುರುವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ವಿಷ್ಣು ಶಂಕರ್ ಜೈನ್, ಅಡ್ವೊಕೇಟ್ ಕಮಿಷನರ್ ನೇಮಕ ಮಾಡಬೇಕು ಎಂಬ ನಮ್ಮ ಬೇಡಿಕೆಗೆ ನ್ಯಾಯಾಲಯ ಅನುಮತಿ ನೀಡಿದೆ. ಅಡ್ವೊಕೇಟ್ ಕಮಿಷನರ್ ಯಾರಾಗುತ್ತಾರೆ, ವಿಧಾನಗಳೇನು ಮತ್ತು ಅದು ತ್ರಿಸದಸ್ಯ ಸಮಿತಿಯಾಗಬಹುದೇ? ಈ ಎಲ್ಲಾ ವಿಷಯಗಳು ಡಿಸೆಂಬರ್ 18 ರಂದು ನಿರ್ಧಾರವಾಗುತ್ತವೆ ಎಂದಿದ್ದಾರೆ.

ಶಾಹಿ ಈದ್ಗಾ ಮಸೀದಿಯಲ್ಲಿ ಸಾಕಷ್ಟು ಸಂಕೇತಗಳು ಮತ್ತು ಚಿಹ್ನೆಗಳು ಇವೆ ಮತ್ತು ವಾಸ್ತವಿಕ ಸ್ಥಿತಿಯನ್ನು ತಿಳಿಯಲು ನಿಜವಾದ ಅಡ್ವೊಕೇಟ್ ಕಮಿಷನರ್ ಅಗತ್ಯವಿದೆ ಎಂದು ನಾವು ಒತ್ತಾಯಿಸಿದ್ದೇವೆ. ನ್ಯಾಯಾಲಯವು ನಮ್ಮ ಅರ್ಜಿಯನ್ನು ಅಂಗೀಕರಿಸಿದೆ ಎಂದು ಅವರು ತಿಳಿಸಿದ್ದಾರೆ.