ನವದೆಹಲಿ: ವಾಹನಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆ. ಈ ಬಗ್ಗೆ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸುಳಿವು ನೀಡಿದ್ದಾರೆ. 2019 ಮಾರ್ಚ್ ನಂತರ ತಯಾರಾಗುವ ಕಾರುಗಳಲ್ಲಿ ಸೀಟ್ -ಬೆಲ್ಟ್ ಎಚ್ಚರಿಕೆ ಸಾಧನ, ಚಾಲಕರಿಗೆ ಏರ್ ಬ್ಯಾಗ್, ವೇಗ ಎಚ್ಚರಿಕೆ ಹಾಗೂ ರಿವರ್ಸ್ ಪಾರ್ಕಿಂಗ್ ಎಚ್ಚರಿಕೆ ಸಾಧನ ಕಡ್ಡಾಯವಾಗಲಿದೆ.
2020ರ ವೇಳೆಗೆ ರಸ್ತೆ ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದು. ದೇಶದಾದ್ಯಂತ ಅಪಘಾತ ವಲಯಗಳನ್ನು ಗುರುತಿಸಲು ಸರ್ಕಾರ ₹20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸುತ್ತಿದೆ ಎಂದು ತಿಳಿಸಿದ್ದಾರೆ.