ನವದೆಹಲಿ: ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಶೇಕಡಾ 1 ರಷ್ಟು ಏರಿಕೆ ಕಾಣುವ ಮೂಲಕ 20000.40 ರಲ್ಲಿ ವಹಿವಾಟು ನಡೆಸುತ್ತಿದೆ. ಅತ್ತ ಬಿಎಸ್‌ಇ ಸೆನ್ಸೆಕ್ಸ್ 67,127 ರಲ್ಲಿ ವಹಿವಾಟು ನಡೆಸುತ್ತಿದೆ. ಮಧ್ಯಾಹ್ನ 3;30ಕ್ಕೆ ಅಂದರೆ ವಹಿವಾಟು ಕೊನೆಗೊಳ್ಳುವ ವೇಳೆ ನಿಫ್ಟಿ ಈ ಸಾಧನೆ ಮಾಡಿದೆಜಾಗತಿಕ ಸವಾಲುಗಳು ಮತ್ತು ಷೇರು ಮಾರುಕಟ್ಟೆಯ ಏರಿಳಿತವನ್ನು ಮೀರಿದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಇದೇ ಮೊದಲ ಬಾರಿಗೆ 20 ಸಾವಿರ ಗಡಿ ದಾಟಿ ದಾಖಲೆ ಬರೆಯಿತು.
ಜುಲೈನಲ್ಲಿ ಎನ್ಎಸ್ಇ 19,900 ರಿಂದ 20,000 ಅಂಕ ದಾಖಲಿಸಿದೆ ಎಂದು ಊಹಿಸಲಾಗಿತ್ತು. ಜಾಗತಿಕ ಸವಾಲುಗಳು ಮತ್ತು ದುರ್ಬಲ ವಹಿವಾಟಿನಿಂದಾಗಿ ಶೇಕಡಾ 1 ರಷ್ಟು ಕುಸಿದು 19,800 ಕ್ಕೆ ತಲುಪಿತ್ತು. ಇದಾದ ಬಳಿಕ ದೊಡ್ಡ ನಷ್ಟವಲ್ಲವಾದರೂ, ಏರಿಕೆಯತ್ತ ಸಾಗುತ್ತಾ ದಾಖಲೆಯ 20 ಸಾವಿರ ಅಂಕಕ್ಕೆ ಬಂದು ತಲುಪಿದೆ.ನಿಫ್ಟಿ 50 ಮತ್ತು ಬಿಎಸ್‌ಇ ಸೆನ್ಸೆಕ್ಸ್ ಕಳೆದೊಂದು ವಾರದಿಂದ ತಲಾ ಶೇ 2 ರಷ್ಟು ಪ್ರಗತಿ ಸಾಧಿಸಿವೆ. ದೇಶೀಯ ಆರ್ಥಿಕ ಸಾಧನೆ ಮತ್ತು ಆಗಸ್ಟ್‌ನಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರ ಹೆಚ್ಚಳದಿಂದಾಗಿ ಮಾರುಕಟ್ಟೆ ಚೇತರಿಕೆ ಹಾದಿ ಹಿಡಿದಿದೆ. ಮಧ್ಯಾಹ್ನ 3:30 ರ ಸುಮಾರಿಗೆ ನಿಫ್ಟಿ-50 185.45 ಪಾಯಿಂಟ್‌ಗಳ ಏರಿಕೆ ಕಂಡು 20,005.40 ಕ್ಕೆ ತಲುಪಿತು. ಬಿಎಸ್‌ಇ ಸೆನ್ಸೆಕ್ಸ್ ಕೂಡ 557 ಪಾಯಿಂಟ್‌ಗಳಿಂದ 67,156 ಕ್ಕೆ ತಲುಪಿದೆ.
ಹಲವಾರು ಸವಾಲುಗಳ ನಡುವೆ ಮಾರುಕಟ್ಟೆಯ ಏರಿಳಿತದ ಅವಧಿಯಲ್ಲಿ ದಾಖಲಾಗಿರುವುದು ಗಮನಾರ್ಹವಾಗಿದೆ. ಜುಲೈನಲ್ಲಿ ನಿಫ್ಟಿ ಸೂಚ್ಯಂಕವು ಈ ಮೈಲಿಗಲ್ಲು ಸಾಧಿಸುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು. ಅದರ ನಂತರವೂ ಮೇಲ್ಮುಖದಲ್ಲೇ ಸಾಗಿದ ನಿಫ್ಟಿ ಇದೀಗ ಸಾರ್ವಕಾಲಿಕ ಗರಿಷ್ಠವನ್ನು ಮುಟ್ಟಿದೆ. ಈ ವರ್ಷ ಮಾರ್ಚ್ನಿಂದ ಶೇಕಡಾ 15 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ಭಾರತೀಯ ಆರ್ಥಿಕತೆ ಬಗ್ಗೆ ಜಾಗತಿಕವಾಗಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳು ಹಾಗೂ ಅದರಲ್ಲೂ ವಿಶೇಷವಾಗಿ G20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ಪ್ರಮುಖ ನಿರ್ಣಯಗಳನ್ನು ಅಧ್ಯಕ್ಷತೆ ವಹಿಸಿದ ಭಾರತ ವಹಿಸಿದ ಪಾತ್ರದ ಹಿನ್ನೆಲೆ ಭಾರಿ ಪ್ರಶಂಸೆಗೆ ಕಾರಣವಾಗಿದೆ. ಇದು ಇಂದಿನ ನಿಫ್ಟಿ ಹಾಗೂ ಷೇರು ವ್ಯವಹಾರದಲ್ಲಿ ಏರಿಕೆಯ ಸಂಚಲನಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಗಳು, ಖಾಸಗಿ ಬಂಡವಾಳ ವೆಚ್ಚಗಳು, ಸಾಲ ಹೆಚ್ಚಳ ಮತ್ತು ಆಗಸ್ಟ್‌ನಲ್ಲಿ ಷೇರುಗಳ ಖರೀದಿ ಸೂಚ್ಯಂಕಗಳು ದೇಶೀಯ ಆರ್ಥಿಕತೆಯು ದೃಢವಾಗಿ ನಿಲ್ಲಲು ಕಾರಣವಾಯಿತು. ಹಣದುಬ್ಬರ, ಹೆಚ್ಚಿದ ಬಡ್ಡಿದರಗಳು, ಏರುತ್ತಿರುವ ಕಚ್ಚಾ ಬೆಲೆಗಳು, ಮಾನ್ಸೂನ್ ಕುಂಠಿತ ಮತ್ತು ಜಾಗತಿಕ ಮಾರುಕಟ್ಟೆಗಳ ಮಂದಗತಿ ಸೇರಿ ಮುಂತಾದ ಸವಾಲುಗಳನ್ನು ಇದು ಮೀರಿದೆ.
ಏಪ್ರಿಲ್ ಆರಂಭದಿಂದ ನಿಫ್ಟಿ 17 ಪ್ರತಿಶತದಷ್ಟು ಏರಿಕೆಯಾಗಿದೆ. 18.9 ಬಿಲಿಯನ್ ಡಾಲರ್ ಒಳಹರಿವಿನಿಂದ ಉತ್ತೇಜಿಸಲ್ಪಟ್ಟಿದೆ. ಈ ಅವಧಿಯಲ್ಲಿ ಡಿಐಐ 33,397 ಕೋಟಿ ರೂಪಾಯಿ ದಾಖಲಾಯಿತು. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಗಣನೀಯ ಪ್ರಗತಿಯನ್ನು ಸಾಧಿಸಿವೆ. ಎರಡೂ ಕ್ರಮವಾಗಿ 41 ಪ್ರತಿಶತ ಮತ್ತು 47 ಪ್ರತಿಶತದಷ್ಟು ಏರಿಕೆಯಾಗಿವೆ. ಷೇರುಗಳ ಸ್ಟಾಕ್ ಮತ್ತು ಭಾರತದಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸು ಸೇರಿದಂತೆ ಹಲವು ಬೆಳವಣಿಗೆಗಳು ಈ ನಿಫ್ಟಿಯ ಏರಿಕೆಗೆ ಕಾರಣವಾಗಿವೆ.
ದೊಡ್ಡ ದೊಡ್ಡ ಕಂಪನಿಗಳ ಷೇರುಗಳಲ್ಲಿ ಕಂಡು ಬಂದ ಖರೀದಿ ಭರಾಟೆ, ಜಿ-20 ಯಶಸ್ಸು ಈ ಏರಿಕೆಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಷೇರು ತಜ್ಞರೊಬ್ಬರು ಮಾರುಕಟ್ಟೆಗಳು ಸಂಭ್ರಮದಲ್ಲಿವೆ. ಇದು ಮುಂದಿನ ದಿನಗಳಲ್ಲಿ 20500ಕ್ಕೂ ಏರಿಕೆ ಕಾಣಬಹುದು ಎಂದು ಅಂದಾಜಿಸಿದ್ದಾರೆ.