ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ, ಹಿಂದಿನ ಶೈಕ್ಷಣಿಕ ದಾಖಲೆಗಳ ಆಧಾರದಲ್ಲಿ ಮುಂದಿನ ತರಗತಿಗೆ ಪಾಸ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಅಲ್ಲದೆ, ನಿಗದಿಯಂತೆ ಜೂನ್ 21ರಿಂದ ಜುಲೈ 5ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಮುಂದಿನ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
ಒಂದರಿಂದ ಏಳನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೇ 1ರಿಂದ ಜೂನ್ 6ರವರೆಗೆ ಬೇಸಿಗೆ ರಜೆ ಎಂದು ಘೋಷಿಸಲಾಗಿದೆ. ಜೂನ್ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಇದೆ. ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ ಎಂದು ತಿಳಿಸಲಾಗಿದೆ.
ಈ ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದ್ದು, ಕೋವಿಡ್ ಸೋಂಕಿನ ಸ್ಥಿತಿಗತಿ ಅನುಸಾರ ಬದಲಾಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.












