ನವದೆಹಲಿ: ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಎಲ್ಲ ಆರು ಚರಣಗಳನ್ನು ಹಾಡುವುದು ಕಡ್ಡಾಯ. ರಾಷ್ಟ್ರ ಗೀತೆಯೊಂದಿಗೆ ಹಾಡುವುದಿದ್ದಲ್ಲಿ ಮೊದಲಿಗೆ ‘ವಂದೇ ಮಾತರಂ’ ಹಾಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.‘ವಂದೇ ಮಾತರಂ’ ಹಾಡುವುದಕ್ಕೆ ಮತ್ತು ನುಡಿಸುವುದಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಚಿವಾಲಯವು ಜನವರಿ 28ರಂದು ಈ ಸಂಬಂಧ ಆದೇಶ ಹೊರಡಿಸಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಮತ್ತು ರಾಜ್ಯಪಾಲರು ಆಗಮಿಸುವ ವೇಳೆ ಇಲ್ಲವೇ ಕಾಯಕ್ರಮ ಮುಗಿಸಿ ನಿರ್ಗಮಿಸುವ ವೇಳೆ, ಆಕಾಶವಾಣಿ ಮತ್ತು ಟಿ.ವಿಗಳ ಮೂಲಕ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಭಾಷಣ ಮಾಡುವುದಕ್ಕೂ ಮೊದಲು ಹಾಗೂ ನಂತರ, ರಾಷ್ಟ್ರ ಧ್ವಜಾರೋಹಣ ಮಾಡುವ ವೇಳೆ ‘ವಂದೇ ಮಾತರಂ’ನ ಎಲ್ಲ ಆರು ಚರಣಗಳನ್ನು ಹಾಡುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವ ಯಾವ ಸಂದರ್ಭಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಬೇಕು ಅಥವಾ ಇದನ್ನು ಹಾಡಬೇಕಾದ ಕಾರ್ಯಕ್ರಮಗಳ ಪಟ್ಟಿಯನ್ನು ಒದಗಿಸಲು ಸಾಧ್ಯ ಇಲ್ಲ. ರಾಷ್ಟ್ರ ಗೀತೆಯನ್ನು ಹಾಡುವ ಸಂದರ್ಭಗಳಲ್ಲೆಲ್ಲಾ ‘ವಂದೇ ಮಾತರಂ’ನ ಅಧಿಕೃತ ಶೈಲಿಯಲ್ಲಿ ಹಾಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಕಾರಣಕ್ಕೆ ಕಳೆದ ವರ್ಷ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಈಗ, ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಕ್ಕೆ ಸಂಬಂಧಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಕೈಗೊಂಡಿದ್ದ ನಿರ್ಧಾರದಂತೆ ಪ್ರಸ್ತುತ, ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿದೆ. ಈ ಗೀತೆ ಕುರಿತು ಸಂವಿಧಾನ ರಚನಾ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಇದರಲ್ಲಿ ‘ಕೋಮುವಾದಿ’ ಅಂಶಗಳಿವೆ ಎಂದು ಒಂದು ವರ್ಗದ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ, ಈ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕುರಿತು ಸಭೆಯಲ್ಲಿಯೂ ಆಗ ನಿರ್ಣಯ ಕೈಗೊಳ್ಳಲಾಗಿತ್ತು.
ಆದೇಶದ ಪ್ರಮುಖ ಅಂಶಗಳು
*‘ವಂದೇ ಮಾತರಂ’ನ ಅಧಿಕೃತ ಶೈಲಿ ಹಾಡುವುದಕ್ಕೆ ಅಂದಾಜು 3 ನಿಮಿಷ 10 ಸೆಕೆಂಡುಗಳು ಬೇಕು. ಈ ಗೀತೆಯನ್ನು ಹಾಡುವ ಇಲ್ಲವೇ ನುಡಿಸುವ ವೇಳೆ ಸಭಿಕರು /ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕು
*ಯಾವುದೇ ನ್ಯೂಸ್‌ರೀಲ್ ಅಥವಾ ಸಾಕ್ಷ್ಯಚಿತ್ರ ಇಲ್ಲವೇ ಚಲನಚಿತ್ರದ ಪ್ರದರ್ಶನದ ವೇಳೆ ‘ವಂದೇ ಮಾತರಂ’ ಗೀತೆಯನ್ನು ಬಿತ್ತರಿಸುತ್ತಿದ್ದರೆ, ಪ್ರೇಕ್ಷಕರು ನಿಲ್ಲುವ ಅಗತ್ಯ ಇಲ್ಲ. ಈ ರೀತಿ ಮಾಡುವುದರಿಂದ ಚಿತ್ರದ ಪ್ರದರ್ಶನಕ್ಕೆ ಅಡ್ಡಿಯನ್ನುಂಟು ಮಾಡಿದಂತಾಗಲಿದೆ. ಅಲ್ಲದೇ, ಈ ಗೀತೆಗೆ ಗೌರವ ತರುವುದಕ್ಕಿಂತ ಗೊಂದಲಕ್ಕೆ ಕಾರಣವಾಗುವುದು
*ರಾಷ್ಟ್ರ ಗೀತೆ ಮತ್ತು ‘ವಂದೇ ಮಾತರಂ’ ನುಡಿಸುವ/ಹಾಡುವ ವಿಚಾರ ಬಂದಾಗ, ಮೊದಲಿಗೆ ‘ವಂದೇ ಮಾತರಂ’ ಹಾಡಬೇಕು ಇಲ್ಲವೇ ನುಡಿಸಬೇಕು
*‘ವಂದೇ ಮಾತರಂ’ ಹಾಡುವುದರೊಂದಿಗೆ ಶಾಲಾ ಚಟುವಟಿಕೆಗಳು ಆರಂಭಿಸಬೇಕು. ಶಾಲೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ರಾಷ್ಟ್ರ ಗೀತೆ ಮತ್ತು ‘ವಂದೇ ಮಾತರಂ’ ಹಾಡುವುದನ್ನು ಜನಪ್ರಿಯಗೊಳಿಸುವುದಕ್ಕೆ ಶಾಲಾ ಆಡಳಿತಗಳು ಕ್ರಮ ತೆಗೆದುಕೊಳ್ಳಬೇಕು
*ಸಚಿವರು ಪಾಲ್ಗೊಳ್ಳುವ ಸಮಾರಂಭಗಳಲ್ಲಿ ಕೂಡ ‘ವಂದೇ ಮಾತರಂ’ ಹಾಡುವುದಕ್ಕೆ ಒತ್ತು ನೀಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಾಮೂಹಿಕವಾಗಿ ಹಾಡುವುದು ಅಪೇಕ್ಷಣೀಯ
*ಸಭಾಂಗಣದಂತಹ ಸ್ಥಳಗಳಲ್ಲಿ ಎಲ್ಲರೂ ಒಟ್ಟಿಗೆ ಹಾಡುವುದಕ್ಕೆ ಅನುಕೂಲವಾಗುವಂತೆ ಧ್ವನಿವರ್ಧಕ ವ್ಯವಸ್ಥೆ ಇರಬೇಕು. ಅಗತ್ಯ ಕಂಡುಬಂದಲ್ಲಿ, ‘ವಂದೇ ಮಾತರಂ’ ಗೀತೆಯ ಮುದ್ರಿತ ಪ್ರತಿಗಳನ್ನು ಸಭಿಕರಿಗೆ/ಪ್ರೇಕ್ಷಕರಿಗೆ ಹಂಚಬೇಕು
*ತಾಯ್ನಾಡಿಗೆ ಗೌರವ ತೋರುವುದಕ್ಕಾಗಿ ಹಾಗೂ ಸಮರ್ಪಕ ಶಿಷ್ಟಾಚಾರ ಪಾಲನೆಯೊಂದಿಗೆ ‘ವಂದೇ ಮಾತರಂ’ ಅನ್ನು ಸಾಮೂಹಿಕವಾಗಿ ಹಾಡ ಬಹುದು. ಈ ವೇಳೆ, ಅದರ ಘನತೆಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು.
















