ಜೂನ್ 21ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಮುಕ್ತ

ಮಣಿಪಾಲ: ಸೋಮವಾರದಿಂದ (ಜೂನ್ 21) ಜಾರಿಗೆ ಬರುವಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು, ಒಳರೋಗಿ ಸೇವೆಗಳು, ನಾನ್ – ಓಪಿಡಿ ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದಂತೆ ಎಲ್ಲಾ ವಿಭಾಗಗಳು ಸಾರ್ವಜನಿಕರಿಗೆ ಸೇವೆಗೆ ಮುಕ್ತವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಹೊರರೋಗಿ ವಿಭಾಗ ಸೇವೆಗಳು ಇಡೀ ದಿನ ಅಂದರೆ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಲಭ್ಯವಾಗಲಿದೆ. ಹಾಗೆ, ಎಲ್ಲ ರೀತಿಯ ಶಸ್ತ್ರಚಿಕಿತ್ಸಾ ಸೌಲಭ್ಯ ಕೂಡ ದೊರೆಯಲಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಒಳ ರೋಗಿಯಾಗಿ ಸೇರ್ಪಡೆಯಾಗಲು ಕೋವಿಡ್ -19 ಪರೀಕ್ಷೆ (RT-PCR) ಖಡ್ಡಾಯವಾಗಿದೆ. ಒಂದು ವೇಳೆ ತಮ್ಮ ಊರಿನಲ್ಲಿಯೇ ಮಾಡಿಸಿದ್ದರೆ ಗಂಟಲ ದ್ರವ ತೆಗೆದ 72 ಘಂಟೆಗಳ ವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಇಲ್ಲವಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ  ಸೇರ್ಪಡೆಗೊಳಿಸುವ ಮೊದಲು ಖಡ್ಡಾಯವಾಗಿ  ಕೋವಿಡ್  -19 ಪರೀಕ್ಷೆ  ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು.ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದರು.