ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಜುಲೈ 1ರಿಂದ ಇಂಧನ ಮಾರಾಟವು ಎಂದಿನಂತೆ ಯಾವುದೇ ನಿರ್ಬಂಧವಿಲ್ಲದೆ ನಡೆಯಲಿದೆ.
ಈ ಕುರಿತು ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದ್ದು, ಪ್ರತಿ ವ್ಯಕ್ತಿಗೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬೇಕೆಂಬ ನಿಯಮ ಸೇರಿದಂತೆ ಜೂನ್ 11ರಂದು ಜಾರಿಗೊಳಿಸಿದ್ದ ಎಲ್ಲಾ ನಿರ್ಬಂಧಗಳು ಜುಲೈ 1ರಿಂದ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶದ ಇಂಧನ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜೂನ್ 11ರಂದು ಹೊರಡಿಸಿದ್ದ ಆದೇಶದಂತೆ, ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆದಾರರು ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇಂತಹ ಗ್ರಾಹಕರು ತಮ್ಮ ಅಗತ್ಯಗಳಿಗೆ ಮೀಸಲಾದ ಸರಬರಾಜು ಜಾಲಗಳ ಮೂಲಕವೇ ಇಂಧನ ಖರೀದಿಸಬೇಕೆಂದು ಸೂಚಿಸಲಾಗಿತ್ತು.
ಇದಲ್ಲದೆ, ಸಗಟು ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಗ್ರಾಹಕರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಅಸಹಜ ಬೇಡಿಕೆ ಉಂಟಾದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿತ್ತು. ಇದೀಗ ಈ ಎಲ್ಲ ನಿರ್ಬಂಧಗಳನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಗಿದೆ.

















