ಇಂದಿನಿಂದ ರಾಜ್ಯ ರಾಜಧಾನಿಯಲ್ಲಿ ಪೂರ್ಣರಾತ್ರಿ ತಾಳಮದ್ದಲೆ ಕಾರ್ಯಕ್ರಮ

ಬೆಂಗಳೂರು: ಬಣ್ಣ ಬಣ್ಣದ ವೇಷಗಳಿಲ್ಲದೆ, ಮಾತಿನ ವೈಖರಿಯ ಮೂಲಕವೇ ಕಥಾನಕವೊಂದನ್ನು ಕಟ್ಟಿಕೊಡುವ ತಾಳಮದ್ದಲೆ ಎಂಬ ಯಕ್ಷಗಾನದ ರಂಗ ಪ್ರಕಾರವೊಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಪೂರ್ಣರಾತ್ರಿ ನಡೆಯಲಿದೆ.

ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ಪ್ರಸಂಗಗಳು ಜು.22ರ ರಾತ್ರಿ 10 ರಿಂದ ಯಕ್ಷ ಸಂಕ್ರಾಂತಿ ಹೆಸರಿನಲ್ಲಿ ನಡೆಯಲಿವೆ.

ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬಿ ಅವರ ಸಂಯೋಜನೆಯಲ್ಲಿ, ಕೃಷ್ಣ ಸಂಧಾನ, ಕರ್ಣಾ ರ್ಜುನ ಕಥಾನಕಗಳು ರವಿಚಂದ್ರ ಕನ್ನಡಿಕಟ್ಟೆ, ಗಣೇಶ್ ಹೆಬ್ರಿ, ಚಂದ್ರಕಾಂತ ಮೂಡುಬೆಳ್ಳೆ ಅವರ ಭಾಗವತಿಕೆ ಯಲ್ಲಿ ನಿರೂಪಣೆಗೊಳ್ಳಲಿವೆ. ಅವಿ ನಾಶ್ ಬೈಪಾಡಿತ್ತಾಯ, ಅರ್ಜುನ್ ಕೊರ್ಡೇಲ್, ಕಾರ್ತಿಕ್ ಧಾರೇಶ್ವರ ಹಾಗೂ ಶಶಾಂಕ್‌ ಅಚಾರ್ಯ ಚೆಂಡೆ- ಮದ್ದಲೆಯಲ್ಲಿ ಸಹಕರಿಸಲಿದ್ದು, ಕಾರ್ಯಕ್ರಮಕ್ಕೆ ಆಸನ ಕಾದಿರಿಸಲು ಕೇವಲ 1 ರೂ ಪ್ರವೇಶ ದರ ನಿಗದಿಪಡಿಸಲಾಗಿದೆ.

ದೇವಿದಾಸ ವಿರಚಿತ ಕೃಷ್ಣ ಸಂಧಾನ ಪ್ರಸಂಗದಲ್ಲಿ, ಶ್ರೀಕೃಷ್ಣನಾಗಿ ವಿಶ್ವೇಶ್ವರ ಭಟ್ ಸುಣ್ಣಂಬಳ, ಕೌರವನಾಗಿ ವಾಸುದೇವ ರಂಗಭಟ್ ಹಾಗೂ ವಿದುರನಾಗಿ ಸತೀಶ್‌ ಶೆಟ್ಟಿ ಮೂಡುಬಗೆ ಅರ್ಥ ಹೇಳಲಿದ್ದಾರೆ. ಬಳಿಕ ಗೇರುಸೊಪ್ಪ ಶಾಂತಪಯ್ಯ ವಿರಚಿತ ಕರ್ಣಾರ್ಜುನ ಪ್ರಸಂಗದಲ್ಲಿ, ಕರ್ಣನಾಗಿ ಸಂಕದಗುಂಡಿ ಗಣಪತಿ ಭಟ್‌, ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ, ಶಲ್ಯನಾಗಿ ವಾಸುದೇವ ರಂಗಭಟ್, ಕೃಷ್ಣನಾಗಿ ಅಶ್ವಥ್ ಹೆಗ್ಡೆ ಹಾಗೂ ಸರ್ಪಾಸ್ತ್ರವಾಗಿ ಸುಧಾಕರ ಜೈನ್‌ ಹೊಸಬೆಟ್ಟುಗುತ್ತು ಅವರು ಮೆರೆಯಲಿದ್ದಾರೆ.

ವಿವರಗಳಿಗೆ ನಾಗರಾಜ ಶೆಟ್ಟಿ ಅವರನ್ನು ಮೊಬೈಲ್ ಸಂಖ್ಯೆ 9741474255 ಮೂಲಕ ಸಂಪರ್ಕಿಸಬಹುದು.