HomeTrendingಮಹಾರಾಷ್ಟ್ರ ಬಿಕ್ಕಟ್ಟು: ಉದ್ಧವ್ ಠಾಕ್ರೆ ರಾಜೀನಾಮೆ, ಎಲ್ಲರ ಚಿತ್ತ ಬಿಜೆಪಿಯತ್ತ

ಮಹಾರಾಷ್ಟ್ರ ಬಿಕ್ಕಟ್ಟು: ಉದ್ಧವ್ ಠಾಕ್ರೆ ರಾಜೀನಾಮೆ, ಎಲ್ಲರ ಚಿತ್ತ ಬಿಜೆಪಿಯತ್ತ

ಮುಂಬಯಿ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಗುರುವಾರ, ಜೂನ್ 30 ರಂದು ನಡೆಯಬೇಕಿದ್ದ ಮಹತ್ತರ ಪರೀಕ್ಷೆಗೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಠಾಕ್ರೆ ಅಧಿಕಾರದಿಂದ ಕೆಳಗಿಳಿಯುವುದರೊಂದಿಗೆ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವಯಲು ತಿಳಿಸಿದ್ದಾರೆ.

ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ತಡೆ ನೀಡಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ವಿಶ್ವಾಸಮತ ಪರೀಕ್ಷೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಬುಧವಾರ ರಾತ್ರಿ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ ನಂತರ ಮುಂಬೈನಲ್ಲಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸದಲ್ಲಿ ಹಲವಾರು ಬಿಜೆಪಿ ಶಾಸಕರು ಮತ್ತು ಹಿರಿಯ ನಾಯಕರು ಜಮಾಯಿಸಿದ್ದರು. ಶಿವಸೇನೆ ನೇತೃತ್ವದ ಎಂವಿಎ ಸರ್ಕಾರ ಪತನಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಪರಸ್ಪರ ಅಭಿನಂದಿಸಿದ್ದಾರೆ.

ಫ್ಲೋರ್ ಟೆಸ್ಟ್ ಗೆ ಬರಬೇಕಿದ್ದ ಬಂಡಾಯ ಶಿವಸೈನಿಕರನ್ನು ನೇರವಾಗಿ ಪ್ರಮಾಣವಚನ ಸ್ವೀಕಾರ ದಿನದಂದು ಬರಲು ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಫಡ್ನವೀಸ್ ನೇತೃತ್ವದ ಸಚಿವಾಲಯದ ಪ್ರಮಾಣ ವಚನ ಶೀಘ್ರದಲ್ಲೇ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏತನ್ಮಧ್ಯೆ, ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.

error: Content is protected !!