ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ಕೊರಂಗ್ರಪಾಡಿ 3ನೇ ವಾರ್ಡಿನ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಂಕರ್ ಪಾಲನ್ ಎದುರಾಳಿ ಅಭ್ಯರ್ಥಿಯ ಎದುರು 67 ಮತಗಳಿಂದ ಜಯಗಳಿಸಿದ್ದು, ಮತದಾರರು ಬಿಜೆಪಿ ಪರವಾಗಿದ್ದರೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಹೇಳಿದ್ದಾರೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹಾಗೂ ನೂರಾರು ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶತಪ್ರಯತ್ನ ಮಾಡಿದರೂ ಯಶಸ್ಸು ಸಿಗಲಿಲ್ಲ. ಅಲ್ಲದೆ, ಈ ಹಿಂದೆ ದಿ. ಪ್ರವೀಣ್ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯದ ಅಧ್ಯಕ್ಷರಾಗಿದ್ದವರು. ಚುನಾವಣೆಗೆ ನಿಂತಿದ್ದವರು ಅವರ ತಮ್ಮ ಪ್ರಸಾದ್ ಶೆಟ್ಟಿ, ಸರಳ ಸಜ್ಜನಿಕೆಯ ವ್ಯಕ್ತಿ. ಅಂತಹ ವರ್ಚಸ್ವಿ ನಾಯಕನ ಎದುರು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಇದು ಜನರು ಕಾಂಗ್ರೆಸ್ ಪರ ಇಲ್ಲ ಎನ್ನುವ ಸ್ಪಷ್ಟ ಸೂಚನೆ ಎಂದರು.
ಅಲೆವೂರು ಪಂಚಾಯತ್ ಆಡಳಿತ ಜನರನ್ನು ಯಾವ ರೀತಿ ತಲುಪಿದೆ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಪಂಚಾಯತ್ ಆಡಳಿತ ಜನರನ್ನು ಮರುಳು ಮಾಡಿ, ವ್ಯರ್ಥ ಕಾಲಹರಣ ಮಾಡುತ್ತಿದೆ. ಜನತೆ ಕೊಟ್ಟ ಅವಕಾಶವನ್ನು ಸದುಪಯೋಗ ಮಾಡುವುದು ಬಿಟ್ಟು, ಜನವಿರೋಧಿ ಆಡಳಿತ ನಡೆಸಿದುದರ ಪರಿಣಾಮವೂ ಈ ಫಲಿತಾಂಶಕ್ಕೆ ತಕ್ಕ ಮಟ್ಟಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಮುಳುಗುವ ಹಡಗೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಇದು ದಿಕ್ಸೂಚಿಯಾಗಿದೆ ಎಂದು ನಾಯಕ್ ಹೇಳಿದರು.