ಅಲೆವೂರಲ್ಲಿ‌ ಗ್ರಾಮೀಣ ಕ್ರೀಡಾಕೂಟ: ಗ್ರಾಮೀಣ ಸಂಪ್ರದಾಯ ತಿಳಿಯಲು ಕೆಸರ್ಡೊಂಜಿ ದಿನ ಸಹಕಾರಿ: ದಿನಕರ ಬಾಬು

ಉಡುಪಿ: ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಪ್ರಸ್ತುತ ಕೃಷಿಗೆ ಸಂಬಂಧಿಸಿದ ಗ್ರಾಮೀಣ ಕ್ರೀಡೆಗಳು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳನ್ನು ಮತ್ತೆ ಮುನ್ನಾಲೆಗೆ ತರಲು ಇಂತಹ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ. ಯುವ ಜನತೆಯನ್ನು ಕೃಷಿಯ ಕಡೆಗೆ ಸೆಳೆಯುವುದರ ಜತೆಗೆ ಅವರಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳ ಪರಿಚಯ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅಲೆವೂರು ಗುಡ್ಡೆಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಯುವಜನ ಸೇವೆ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಉಡುಪಿ ಜಿ.ಪಂ. ಸಂಯುಕ್ತ ಆಶ್ರಯದಲ್ಲಿ
ಅಲೆವೂರು ಜೋಡುರಸ್ತೆಯ ದೊಡ್ಡಮನೆ ಗದ್ದೆಯಲ್ಲಿ ಭಾನುವಾರ ಆಯೋಜಿಸಲಾದ ‘ಕೆಸರ್ಡ್‌‌ ಒಂಜಿ ದಿನ’ ಗ್ರಾಮೀಣ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕೆಸರ್ಡೊಂಜಿ ದಿನ ಕೇವಲ ಮೋಜಿಗಾಗಿ ನಡೆಯದೆ ಇದರ ಅನುಭವವನ್ನು ಯುವಕರು, ಮಕ್ಕಳು ಪಡೆಯಬೇಕು. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಇಂತಹ ಕ್ರೀಡೋತ್ಸವ ಹೆಚ್ಚು  ನಡೆಯಬೇಕು ಎಂದರು.
ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಕುಕ್ಕಿಕಟ್ಟೆ
ಕೊರಂಗ್ರಪಾಡಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಎ. ಶ್ರೀಧರ ಶೆಟ್ಟಿ,
ಪ್ರಗತಿಪರ ಕೃಷಿಕ ಗೋವಿಂದ ಶೆಟ್ಟಿ, ಅಲೆವೂರು ಉದ್ಯಮಿ ಹರೀಶ್‌ ಶೆಟ್ಟಿ ತೆಂಕಮನೆ, ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶೇಖರ ಕಲ್ಮಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಿತಿಯ ಮಾಜಿ ಅಧ್ಯಕ್ಷ ಮಂಜೇಶ್‌ ಕುಮಾರ್‌ ಸ್ವಾಗತಿಸಿ, ಪ್ರಚಾರ ಕಾರ್ಯದರ್ಶಿ ಎ. ರಾಜೇಶ್‌ ಶೆಟ್ಟಿ ವಂದಿಸಿದರು. ಸಹ ಕೋಶಾಧಿಕಾರಿ ಸುಖೇಶ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.
ಕೆಸರ್ಡ್ ಒಂಜಿ ಸಂಭ್ರಮ:
ಈ ಗ್ರಾಮೀಣ ಕ್ರೀಡಾಕೂಟದಲ್ಲಿ ನೂರಾರು ಮಂದಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್‌, ಪಿರಮಿಡ್‌,
ಗಿರಿಗಿಟ್‌ ಓಟ, ಕಂಬಳ ಓಟ, ಹಿಮ್ಮುಖ ಓಟ, ಕೆಸರುಗದ್ದೆ ಓಟ ಮತ್ತು ಮಹಿಳೆಯರಿಗೆ
ಹಗ್ಗಜಗ್ಗಾಟ, ತ್ರೋಬಾಲ್‌, ಗಿರಿಗಿಟ್‌ ಓಟ, ಕಂಬಳ ಓಟ, ಹಿಮ್ಮುಖ ಓಟ, ಕೆಸರಗದ್ದೆ ಓಟ
ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಹಿಳೆಯರು, ಮಕ್ಕಳು, ಯುವಕರು,
ಹಿರಿಯರು ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಕೆಲವರು ಕೆಸರು ಗದ್ದೆಯಲ್ಲಿ ಪರಸ್ಪರ ಕೆಸರನ್ನು ಮೈಮೇಲೆ ಎರಚಿಕೊಂಡು ಕುಣಿದು
ಕುಪ್ಪಳಿಸಿ ಸಂಭ್ರಮಿಸಿದರು. ಮಧ್ಯಾಹ್ನ ಗಂಜಿ ಊಟ, ಹಲಸಿನ ಖಾದ್ಯ, ಹುರುಳಿ ಸಾರು ಮತ್ತು ಚಟ್ನಿಯ ರುಚಿ ಸವಿದರು.