ನಮಗೂ ಎರಡು ಹೊತ್ತು 90 ಎಂ.ಎಲ್ ಉಚಿತ ಮದ್ಯ ಯೋಜನೆ ಜಾರಿಗೊಳಿಸಿ: ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮದ್ಯಪ್ರಿಯರು!!

ಉಡುಪಿ: ರಾಜ್ಯ ಸರಕಾರ ಮಹಿಳೆಯರಿಗೆ ಸಾಲು ಸಾಲು ಉಚಿತ ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಿದ್ದು, ಮದ್ಯದ ಬೆಲೆ ಏರಿಕೆ ಮಾಡಿದ ಹಿನ್ನಲೆಯಲ್ಲಿ ಇದೀಗ ಮದ್ಯಪ್ರಿಯರು ಒಂದೋ ಮದ್ಯ ಮಾರಾಟ ನಿಷೇಧಿಸಿ ಇಲ್ಲವಾದಲ್ಲಿ ಮದ್ಯವನ್ನು ಉಚಿತವಾಗಿ ನೀಡಿ ಎನ್ನುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು.

ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.

ನಾಗರಿಕ ಸಮಿತಿ ಸದಸ್ಯರಾದ ನಿತ್ಯಾನಂದ ಒಳಕಾಡು ಹಾಗೂ ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ‌ನೀಡುವಂತೆ ಒತ್ತಾಯಿಸಿದರು‌‌.

ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಬರುವುದು ಮದ್ಯಪ್ರಿಯರಿಂದಾಗಿ. ಮದ್ಯದಿಂದ ಬಂದ ಆದಾಯದಿಂದ ಸರ್ಕಾರವು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದು, ಮದ್ಯಪ್ರಿಯರಿಗಾಗಿ ಯಾವುದೇ ಉಚಿತ ಯೋಜನೆಯನ್ನು ಜಾರಿಗೊಳಿಸಿಲ್ಲ. ಇದು ತಾರತಮ್ಯ ನೀತಿಯಾಗಿದ್ದು ಇದರಿಂದ ಮದ್ಯಪ್ರಿಯರಿಗೆ ಅನ್ಯಾಯವಾಗಿದೆ ಎನ್ನುವುದು ಇವರ ಅಳಲು.

ಕಾರ್ಮಿಕರು ಬೆಳಗ್ಗಿನಿಂದ ಸಂಜೆವರೆಗೆ ಮೈಮುರಿದು ದುಡಿದು ತಮ್ಮ ಮೈಕೈ ನೋವು ಹೋಗಲಾಡಿಸಲು ಮದ್ಯ ಸೇವಿಸುತ್ತಾರೆ. ಸರ್ಕಾರ ಒಂದೋ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಇಲ್ಲವಾದಲ್ಲಿ ಉಚಿತವಾಗಿ ಮದ್ಯ ನೀಡಬೇಕು ಎಂದು ಸಮಿತಿಯು ಒತ್ತಾಯಿಸಿದೆ.