8 ವರ್ಷ ಪೊಲೀಸರ ಜೊತೆ ಕಾಡಿನಲ್ಲಿ ಹೆಜ್ಜೆ ಹಾಕಿದ ಆಲ್ಚಿ; ಬೀಳ್ಕೊಡುಗೆಯಲ್ಲಿ ಭಾವುಕರಾದ ಸಿಬ್ಬಂದಿ!

ಕಾರ್ಕಳ: ಎಂಟು ವರ್ಷಗಳ ಕಾಲ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳೊಂದಿಗೆ ಹೆಜ್ಜೆ ಹಾಕಿ, ಸ್ಫೋಟಕಗಳು, ಐಇಡಿಗಳ ಪತ್ತೆ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ತನ್ನ ಕರ್ತವ್ಯ ಮೆರೆದಿದ್ದ ಎಎನ್‌ಎಫ್ ಶ್ವಾನದಳದ ಬೆಲ್ಜಿಯನ್ ಮ್ಯಾಲಿನಾಯ್ಸ್ ತಳಿಯ ಹೆಣ್ಣು ಶ್ವಾನ ‘ಆಲ್ಚಿ’ ಇದೀಗ ಸೇವೆಯಿಂದ ನಿವೃತ್ತಿಗೊಂಡಿದೆ.

2018ರ ಆಗಸ್ಟ್ 11ರಂದು ಜನಿಸಿದ್ದ ಆಲ್ಚಿ, ಕೇವಲ ಮೂರು ತಿಂಗಳಲ್ಲೇ ಅಂದರೆ 2018ರ ನವೆಂಬರ್ 10ರಂದು ಆ್ಯಂಟಿ ನಕ್ಸಲ್ ಫೋರ್ಸ್ (ANF) ಶ್ವಾನದಳಕ್ಕೆ ಸೇರ್ಪಡೆಯಾಗಿತ್ತು. ಬಳಿಕ ಬೆಂಗಳೂರಿನ ಸಿಆರ್‌ಪಿಎಫ್ ಡಾಗ್ ಬ್ರೀಡಿಂಗ್ ಮತ್ತು ತರಬೇತಿ ಕೇಂದ್ರದಲ್ಲಿ ಬರೋಬ್ಬರಿ 13 ತಿಂಗಳ ಕಠಿಣ ತರಬೇತಿ ಪಡೆದುಕೊಂಡಿತ್ತು.

ಸ್ಫೋಟಕ ಪತ್ತೆ, ಬಾಂಬ್ ಶೋಧ, ಗಸ್ತು ಹಾಗೂ ಅರಣ್ಯ ಕಾರ್ಯಾಚರಣೆಗಳಿಗೆ ವಿಶೇಷ ತರಬೇತಿ ಪಡೆದ ಬಳಿಕ ಆಲ್ಚಿಯನ್ನು ಕಾರ್ಕಳದ ಎಎನ್‌ಎಫ್ ಘಟಕಕ್ಕೆ ನಿಯೋಜಿಸಲಾಗಿತ್ತು.

ಪಶ್ಚಿಮ ಘಟ್ಟದ ಕಾಡಿನಲ್ಲಿ ಧೈರ್ಯದ ಹೆಜ್ಜೆ

ಸೇವೆಯ ಬಹುಪಾಲು ಅವಧಿಯನ್ನು ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಳೆದ ಆಲ್ಚಿ, ಆಗುಂಬೆ, ಹೆಬ್ರಿ, ಜಯಪುರ, ಶೃಂಗೇರಿ, ಕೊಲ್ಲೂರು, ಸುಬ್ರಹ್ಮಣ್ಯ ಹಾಗೂ ಮಡಿಕೇರಿ ಸೇರಿದಂತೆ ನಕ್ಸಲ್‌ ಪೀಡಿತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಹಲವು ಶೋಧ ಹಾಗೂ ಭದ್ರತಾ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿತು.

ತನ್ನ ಅಸಾಧಾರಣ ಘ್ರಾಣಶಕ್ತಿಯ ಮೂಲಕ ಸ್ಫೋಟಕಗಳು ಮತ್ತು ಐಇಡಿಗಳನ್ನು ಪತ್ತೆಹಚ್ಚುವುದು, ಅಪಾಯಕಾರಿ ಪ್ರದೇಶಗಳನ್ನು ಪರಿಶೀಲಿಸುವುದು, ಅರಣ್ಯ ಕಾರ್ಯಾಚರಣೆಗಳಲ್ಲಿ ನೆರವು ನೀಡುವುದು ಹಾಗೂ ನಕ್ಸಲರ ಚಲನವಲನ ಪತ್ತೆಹಚ್ಚುವಲ್ಲಿ ಆಲ್ಚಿ ಪ್ರಮುಖ ಪಾತ್ರ ವಹಿಸಿತು.

ಇಷ್ಟೇ ಅಲ್ಲದೆ, ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳು ಕಾರ್ಕಳ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ವಿಐಪಿ ಭದ್ರತೆ, ಬಾಂಬ್ ಪತ್ತೆ ಹಾಗೂ ಭದ್ರತಾ ತಪಾಸಣೆಯ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿತ್ತು.

ನಿರ್ವಾಹಕರೊಂದಿಗೆ ವಿಶೇಷ ಬಾಂಧವ್ಯ

ಆಲ್ಚಿಯ ಎಂಟು ವರ್ಷಗಳ ಸೇವಾ ಅವಧಿಯಲ್ಲಿ ಶ್ವಾನ ನಿರ್ವಾಹಕರಾದ ಪ್ರದೀಪ್ ಬಿ.ಡಿ. ಹಾಗೂ ಧನಂಜಯ ಅವರು ಅತ್ಯಂತ ಕಾಳಜಿ, ಸಮರ್ಪಣೆ ಮತ್ತು ವೃತ್ತಿಪರತೆಯಿಂದ ಅದನ್ನು ನೋಡಿಕೊಂಡರು.

ಜುಲೈ 20ರಂದು ಕಾರ್ಕಳದಲ್ಲಿರುವ ಎಎನ್‌ಎಫ್ ಮುಖ್ಯ ಕಚೇರಿಯಲ್ಲಿ ಸರಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನ ನಿರ್ವಾಹಕರು ಆಲ್ಚಿಯ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಇನ್ನು ಮೂರು ಶ್ವಾನಗಳ ಸೇವೆ

ಆಲ್ಚಿಯ ನಿವೃತ್ತಿಯ ಬಳಿಕ ಎಎನ್‌ಎಫ್ ಶ್ವಾನದಳದಲ್ಲಿ ಅಮರಿ, ಅಗೆರಾ ಮತ್ತು ಆಂಜಿ ಎಂಬ ಮೂರು ಶ್ವಾನಗಳು ಸೇವೆ ಮುಂದುವರಿಸಲಿವೆ.

ಎಂಟು ವರ್ಷಗಳ ಕಾಲ ಭದ್ರತಾ ಪಡೆಗಳೊಂದಿಗೆ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಸಾಥ್ ನೀಡಿದ ಆಲ್ಚಿ, ಇದೀಗ ತನ್ನ ಕರ್ತವ್ಯದಿಂದ ನಿವೃತ್ತಿಯಾಗಿದ್ದರೂ, ಎಎನ್‌ಎಫ್‌ನ ಸೇವಾ ಇತಿಹಾಸದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ.