ಅಕ್ಷಯ ತೃತೀಯ ಅಂದರೆ ಹೆಸರೇ ಹೇಳುವಂತೆ ಕ್ಷಯ ಇಲ್ಲದ ದಿನ. ಸಮುದ್ರ ಮಂಥನದ ಕಾಲದಿಂದಲೂ ಅಕ್ಷಯ ತೃತೀಯದ ವಿವರಣೆ ಇದೆ. ಅಷ್ಟೇ ಅಲ್ಲ, ಮಹಾಭಾರತದಲ್ಲೂ ಈ ಬಗ್ಗೆ ಪ್ರಸ್ತಾವ ಇದೆ. ಆದರೆ ನಮ್ಮೆಲ್ಲರಿಗೂ ಮೊದಲು ಗೊತ್ತಾಗಬೇಕಿದ್ದು ಏನೆಂದರೆ, ಈ ದಿನ ದಾನಕ್ಕೆ ಮಹತ್ವ ಹೆಚ್ಚು. ಆದ್ದರಿಂದ ನಿಮ್ಮಿಂದ ಅದೆಷ್ಟು ಸಣ್ಣ ಪ್ರಮಾಣದ ಚಿನ್ನವನ್ನಾದರೂ ಖರೀದಿಸಿ, ದಾನ ಮಾಡಿದರೆ ಅದರ ಫಲ ಅಧಿಕವಾಗುತ್ತದೆ. ನಿಮಗೆ ಪರಿಚಿತರು ಇದ್ದು ಅಥವಾ ಮದುವೆಗೋ ಅಥವಾ ಬೇರೆ ಯಾವುದೋ ಉದ್ದೇಶಕ್ಕೆ ಸ್ವಲ್ಪ ಪ್ರಮಾಣವಾದರೂ ಚಿನ್ನವನ್ನು ದಾನ ಮಾಡಿದರೆ ಅದರ ಫಲ ಅಕ್ಷಯ ಆಗುತ್ತದೆ. ಆ ದಾನವನ್ನು ಅಕ್ಷಯ ತೃತೀಯದಂದು ಮಾಡಬೇಕು.

ಇನ್ನು ಅಕ್ಷಯ ತೃತೀಯದಂದು ದೇವರ ಪೂಜೆ, ಸೇವೆ, ಕೈಂಕರ್ಯಗಳನ್ನು ಮಾಡಿದರೆ ಆ ಭಗವಂತ ನೀಡುವ ಆಶೀರ್ವಾದದ ಫಲ ಕೂಡ ಅಕ್ಷಯವಾಗುತ್ತದೆ. ಈಗ ಹೇಗಿದ್ದರೂ ವೈಶಾಖ ಮಾಸ. ಮಾವಿನಹಣ್ಣು ದೊರೆಯುತ್ತದೆ. ಅದರ ಜೊತೆಗೆ ಈಗಿನ ಬೇಸಿಗೆಗೆ ಪಾನ- ಕೋಸಂಬರಿಯನ್ನು ಬ್ರಾಹ್ಮಣ- ಮುತ್ತೈದೆಯರಿಗೆ ದಾನ ಮಾಡಬೇಕು. ಅವರ ಆಶೀರ್ವಾದ ಫಲ ಕೂಡ ಅಕ್ಷಯ ಆಗುತ್ತದೆ.

ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ತಮ್ಮ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಜನರು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಮರಳಿ ಅವರಿಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ದಿನವು ಹೊಂದಿದೆ. ಅಂತೆಯೇ ಯಾವುದೇ ಹೊಸ ಕೆಲಸಗಳನ್ನು ನೀವು ಈ ದಿನದಂದು ಆರಂಭಿಸಿದರೆ ನಿಮಗೆ ಅದು ಶುಭವಾಗುತ್ತದೆ ಎಂದಾಗಿದೆ. ವಿವಾಹಗಳಿಗೆ ಈ ದಿನ ಶುಭ ಎಂಬ ನಂಬಿಕೆ ಇದೆ. ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ. ಅಂತೆಯೇ ದಂಪತಿಗಳು ಆನಂದದಿಂದ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ ಮುಂದಿನ ದಿನಗಳನ್ನು ಕಳೆಯುತ್ತಾರೆ. ಅಕ್ಷಯ ತೃತೀಯ ಕೂಡ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ



















