ಅಕ್ಷಯ ತೃತೀಯ ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ. ಇದು “ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ” ಎಂದು ಸೂಚಿಸುತ್ತದೆ. ಸಂಸ್ಕೃತದಲ್ಲಿ, ಅಕ್ಷಯ ಎಂದರೆ “ಎಂದಿಗೂ ಕ್ಷಯವಿಲ್ಲದ್ದು” ಎಂದರ್ಥ. ತೃತೀಯಾ ಎಂದರೆ “ಚಂದ್ರನ ಮೂರನೇ ದಿನ”. ಸೂರ್ಯ-ಚಂದ್ರರು ಉಜ್ವಲವಾಗಿ ಬೆಳಗುವ ದಿನ ಇದಾಗಿದ್ದು, ಅಧ್ಯಾತ್ಮದ ದೃಷ್ಟಿಯಿಂದಲೂ ಈ ದಿನವು ಮಹತ್ವವನ್ನು ಪಡೆದಿದೆ. ಈ ದಿನದಂದು ಜಪ ತಪ ನಿಷ್ಠೆಗಳನ್ನು ಮಾಡುವುದರಿಂದ ಮನಸ್ಸು ಮತ್ತು ದೇಹವು ಶುದ್ದಗೊಂಡು ಅಧ್ಯಾತ್ಮದ ಸಾಧನೆಯು ಸುಲಭವಾಗಿ ಮೋಕ್ಷವು ದೊರೆಯುತ್ತದೆ.
ಈ ದಿನ ಸಮಸ್ತ ಸನಾತನಿಗಳಿಗೆ ಶುಭದಿನವಾಗಿದ್ದು, ಅಕ್ಷಯ ತೃತೀಯವು ಅಭ್ಯುದಯ, ಭರವಸೆ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಭಾರತ ಮತ್ತು ನೇಪಾಳದಂತಹ ದೇಶಗಳಲ್ಲಿ ಏನಾದರೂ ಹೊಸತನ್ನು ಮಾಡುವುದಿದ್ದರೆ ಈ ದಿನವನ್ನು ಶುಭದಿನವೆಂದು ಪರಿಗಣಿಸಲಾಗುತ್ತದೆ. ಹೊಸ ಉದ್ಯಮ ಪ್ರಾರಂಭ, ಮದುವೆ ಸಮಾರಂಭ, ಚಿನ್ನ ಖರೀದಿ ಅಥವಾ ಆಸ್ತಿ ಖರೀದಿಯಂತಹ ಕೆಲಸಗಳನ್ನು ಅಕ್ಷಯ ತೃತೀಯದಂದು ಮಾಡಿದಲ್ಲಿ ಶ್ರೇಯಸ್ಕರವೆಂದು ಹೇಳಲಾಗುತ್ತದೆ.
ಕೆಲವು ಸಂಪ್ರದಾಯಗಳಲ್ಲಿ ಅಗಲಿ ಹೋದ ಪ್ರೀತಿಪಾತ್ರರ ಸ್ಮರಣೆಯನ್ನೂ ಈ ದಿನದಂದು ಮಾಡಲಾಗುತ್ತದೆ. ವಿವಾಹಿತ ಸ್ತ್ರೀಯರು ತಮ್ಮ ಸಂಗಾತಿಯ ಉಜ್ವಲ ಭವಿಷ್ಯ ಹಾಗೂ ಆರೋಗ್ಯಕ್ಕಾಗಿ ಈ ದಿನ ಪ್ರಾರ್ಥನೆಗಳನ್ನು ಮಾಡುತ್ತಾರೆ. ಪ್ರಾರ್ಥನೆಯ ನಂತರ ಮೊಳಕೆಯೊಡೆಯುವ ಕಾಳುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಇತರರಿಗೆ ನೀಡುತ್ತಾರೆ. ಅಕ್ಷಯ ತೃತೀಯವು ಸೋಮವಾರ (ರೋಹಿಣಿ ನಕ್ಷತ್ರ)ದಂದು ಬಂದರೆ, ಹೆಚ್ಚು ಮಂಗಳಕರವಾಗಿರುತ್ತದೆ ಎಂದು ನಂಬಲಾಗಿದೆ.
ದಂತಕಥೆಗಳ ಪ್ರಕಾರ, ಅಕ್ಷಯ ತೃತೀಯದ ದಿನದಂದೇ ಋಷಿ ವ್ಯಾಸರು ಹಿಂದೂ ಮಹಾಕಾವ್ಯ ಮಹಾಭಾರತವನ್ನು ಗಣೇಶನಿಗೆ ನಿರೂಪಿಸಿದ್ದರು. ಗಂಗಾ ನದಿಯು ಇದೇ ದಿನ ಭೂಮಿಗೆ ಇಳಿದಿದ್ದಳು ಮತ್ತು ಪರಶುರಾಮರು ಇದೇ ದಿನ ಜನಿಸಿದ್ದರು. ಸುದಾಮನು ಶ್ರೀಕೃಷ್ಣನಿಗೆ ಅವಲಕ್ಕಿಯನ್ನು ಅರ್ಪಿಸಿ ಸಮೃದ್ಧವಾದ ಸಂಪತ್ತು ಮತ್ತು ಸಂತೋಷವನ್ನು ಪಡೆದ ದಿನವೂ ಇದೇ ಎನ್ನಲಾಗುತ್ತದೆ.
ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಒಡಿಸ್ಸಾದ ಪುರಿ ಜಗನ್ನಾಥದ ದೇವಸ್ಥಾನದ ವಾರ್ಷಿಕ ರಥಯಾತ್ರೆಯು ಕೂಡಾ ಈ ದಿನದಂದೇ ಪ್ರಾರಂಭವಾಗುತ್ತದೆ.
ಈ ದಿನದಂದು ಕುಬೇರನು ಸಂಪತ್ತಿನ ಅಧಿಪತಿಯಾಗಿ ನೇಮಕಗೊಂಡಿದ್ದಾನೆ ಎನ್ನುವ ಪ್ರತೀತಿ ಇರುವುದರಿಂದ ಮಹಿಳೆಯರು ವಿಶೇಷವಾಗಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸುವ ಮೂಲಕ ಸಮೃದ್ದಿಯನ್ನು ಮನೆಗೆ ಬರಮಾಡಿಕೊಳ್ಳುತ್ತಾರೆ.
ಈ ಬಾರಿಯ ಅಕ್ಷಯ ತೃತೀಯವನ್ನು ಏ.22 ರಂದು ಆಚರಿಸಲಾಗುತ್ತಿದೆ. ಚಿನ್ನ ಖರೀದಿಸಲು ಸೂಕ್ತ ಸಮಯ: ಏಪ್ರಿಲ್ 23 ಬೆಳಗ್ಗೆ 7.49 ರಿಂದ.
ವಿಷ್ಣು, ಲಕ್ಷ್ಮಿ ಮತ್ತು ಕುಬೇರ ಪೂಜೆ ಅಥವಾ ಯಜ್ಞವನ್ನು ಕೈಗೊಳ್ಳಬಹುದು.