ಮುಂಬೈ:ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಹಾಗೂ ಇತರ ಒಂಬತ್ತು ಎನ್‌ಸಿಪಿ ನಾಯಕರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸಂಚಲನ ಉಂಟಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಅಜಿತ್ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.
ಅಜಿತ್ ಪವಾರ್ ರಾಜ್ಯಪಾಲರನ್ನು ಭೇಟಿಯಾಗಿ ಡಿಸಿಎಂ ಆಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಅಜಿತ್ ಪವಾರ್ ಪದಗ್ರಹಣ ಮಾಡಿದರು. ಜೊತೆಗೆ ಎನ್‌ಸಿಪಿ ನಾಯಕರಾದ ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ಛಗನ್ ಭುಜಬಲ್ ಸೇರಿದಂತೆ ಒಂಬತ್ತು ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಟ್ಟು 53 ಎನ್‌ಸಿಪಿ ಶಾಸಕರ ಪೈಕಿ 30 ಶಾಸಕರು ಅಜಿತ್ ಪವಾರ್ ಅವರೊಂದಿಗೆ ಇದ್ದಾರೆ.
2019ರಲ್ಲೂ ಅಜಿತ್ ಪವಾರ್ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಆದರೆ, ಬಳಿಕ ಉಲ್ಟಾ ಹೊಡೆದು ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ನಂತರ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಸೇರಿ ಮೂರು ಪಕ್ಷಗಳು ಸರ್ಕಾರ ರಚನೆ ಮಾಡಿದ್ದರು. ಇದಾದ ನಂತರ ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿದ್ದರು.
ಬಳಿಕ ತಮ್ಮದೇ ನೇತೃತ್ವದ ಶಾಸಕರನ್ನು ಒಟ್ಟುಗೂಡಿಸಿ ಬಿಜೆಪಿಯೊಂದಿಗೆ ಮೈತ್ರಿಕೊಂಡಿದ್ದಾರೆ. ಸದ್ಯ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಆಗಿದ್ದಾರೆ. ಇದರೊಂದಿಗೆ ಈಗ ಎನ್‌ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಆಗಿ ಸರ್ಕಾರದ ಭಾಗವಾಗಿದ್ದಾರೆ.
ಇದಕ್ಕೂ ಮುನ್ನ ಮುಂಬೈನ ತಮ್ಮ ಅಧಿಕೃತ ನಿವಾಸ ದೇವಗಿರಿಯಲ್ಲಿ ಅಜಿತ್ ಪವಾರ್ ಪಕ್ಷದ ಕೆಲವು ಮುಖಂಡರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಮತ್ತು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಆದರೆ, ಪುಣೆಯಲ್ಲಿದ್ದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೇ ವೇಳೆ, ಅಜಿತ್ ಪವಾರ್ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಶಾಸಕರ ಸಭೆಯನ್ನು ಕರೆಯಬಹುದು ಎಂದಿದ್ದರು. ಇದರ ಬೆನ್ನಲ್ಲೇ ಇಂದು ದಿಢೀರ್ ಬೆಳವಣಿಗೆ ನಡೆದಿದೆ.