♥ ಐಶ್ವರ್ಯ .ಆರ್. ನಾಯ್ಕ್
ಸಂತೋಷದಿಂದ ಮೂರು ಹೊತ್ತು ಊಟ, ಕಣ್ಣು ತುಂಬ ನಿದ್ದೆ, ಆಟ ಪಾಠ ಅಂತ ಪಾಲಕರ ಕಣ್ ರೆಪ್ಪೆಯೊಳಗೆ ಜೋಪಾನವಾಗಿ ಇರೋ ನಮಗೆ, ನಿಜವಾದ ಜೀವನದ ಕಸರತ್ತು ಒಂದು ರೀತಿಲಿ ಅರಿವಾಗೋದು ಅವರಿಂದ ದೂರ ಆದಾಗ ಮಾತ್ರ. ಕೆಲವರಿಗೆ ಈ ಅನುಭವ ಹೊಸತೇನಲ್ಲ. ಆದರೂ ನನ್ನ ಕೆಲವು ಸೆಣಸಾಟಗಳನ್ನು ನಿಮ್ಮ ಮುಂದೆ ಇಡುತ್ತೇನೆ ಕೇಳಿ
ಈಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗೋದು ಅನಿವಾರ್ಯ ಆಗೋಗಿದೆ. ಇನ್ನು ನಾನ್ ಇಷ್ಟ ಪಟ್ಟಿರುವುದನ್ನು ಓದಬೇಕು ಅಂದ್ರೆ ಮನೆಗೆ ಟಾಟಾ ಹೇಳಲೇ ಬೇಕಿತ್ತು. ಪಿಯುಸಿ ಮುಗ್ದಿದ್ದೇ ಮುಗ್ದಿದ್ದು ನನ್ ಸರದಿ ಬಂದೇ ಬಿಡ್ತು, ಮನಸಲ್ಲಿ ಒಂದ್ ಕಡೆ ಹಲವಾರು ಕುತೂಹಲ, ಇನ್ನೊಂದು ಕಡೆ ಬೆಟ್ಟದಷ್ಟು ಕಳವಳ.
ಮನೆಯಿಂದ ದೂರ ಇರ್ಬೇಕು, ಹೊಸ ಜಾಗ, ಹೊಸ ಜನ ಈ ತರದ ಯೋಚನೆಗಳು ಕರೆಂಟ್ ಶಾಕ್ ಕೊಟ್ಟ ಹಾಗೇ ಆಗುತ್ತಿತ್ತು. ಯಾವತ್ತು ಮೂರ್ ಜನರ ಕಿತ್ತಾಟವನ್ನು ಸಮಾಧಾನ ಮಾಡ್ತಿದ್ದ ಅಪ್ಪ ಅಮ್ಮ, ಇನ್ನು ಇಬ್ಬರ ನಡುವೆ ಸಂಧಾನ ಮಾಡಬೇಕಿತ್ತು. ಹೌದು, ಎಲ್ಲದಕ್ಕಿಂತ ನನ್ ಪುಟ್ಟ ತಂಗಿ ತಮ್ಮನ ಬಿಟ್ಟು ಬರೋದು ಮನಸ್ಸನ್ನ ತುಂಬ ಕೆಣಕುತ್ತಿತ್ತು. ಹೊರಡಲು ಎಲ್ಲ ಸಿದ್ದತೆ ಆಯ್ತು ಪಯಣಕ್ಕೆ ಅಪ್ಪ ಅಮ್ಮನೂ ಜೊತೆಯಾದ್ರು.
♥ ಕಣ್ಣೀರ ಮಳೆ ಸುರಿದಾಗ:
ಮಗಳನ್ನ ಜೋಪಾನವಾಗಿ ಕರ್ಕೊಂಡ್ ಹೋಗಿ ದಾರಿ ಉದ್ದ ಸಾವಿರಾರು ಬುದ್ಧಿಮಾತು ಹೇಳಿ, ಇನ್ನೇನು ನನ್ನ ಬಿಟ್ಟು ವಾಪಸ್ ಹೊರಡಬೇಕು ಅನ್ನೋ ಸಮಯದಲ್ಲಿ ಅವರ ಮುಖ ಕಾರ್ಮೋಡ ಕವಿದ ಹಾಗೇ ಆಗಿತ್ತು. ಆಮೇಲೆ ಧಾರಾಕಾರವಾಗಿ ಕಣ್ಣೀರ ಮಳೆಯು ಸುರೀತು. ಅವರು ನನ್ನ ಬಿಟ್ಟು ಅಲ್ಲಿಂದ ಹೊರ್ಡೊ ದೃಶ್ಯ ಇವತ್ತಿಗೂ ಕಣ್ ಮುಂದೆ ಹಾಗೇ ಗೋಚರವಾಗುತ್ತದೆ. ಅತ್ತು ಅತ್ತು ಸುಸ್ತಾದ ನಂಗೆ ಸಮಾಧಾನ ಮಾಡಿದ್ದು ನನ್ನ ಗೆಳತಿ.
ಮರುದಿನದಿಂದ ಹೊಸ ಅಧ್ಯಾಯ ಶುರು, ಈ ಬದಲಾವಣೆ ಹೊಸತಾದ ಅನುಭವಗಳನ್ನೇ ಕೊಟ್ಟುಬಿಟ್ಟಿತು. ಇಷ್ಟು ದಿನ ಬೆಳಗ್ಗೆ ಅಮ್ಮ ಬಂದು “ಐಶು ಏಳೇ ಮಾರಾಯ್ತಿ ಟೈಂ ಆಯ್ತು” ಅಂತ ಫ್ಯಾನ್ ಆಫ್ ಮಾಡಿ ಮೊದಲ ವಾರ್ನಿಂಗ್ ಕೊಡ್ತಿದ್ಲು. ಆಮೇಲೆ ಅಪ್ಪ ಬಂದು ಸೆಕೆಂಡ್ ಅಂಡ್ ಫೈನಲ್ ವಾರ್ನಿಂಗ್ ಕೊಟ್ಟು ಎದ್ದೇಳುವ ಹಾಗೇ ಮಾಡ್ತಿದ್ರು. ಇನ್ನು ಮುಂದೆ ಈ ಕೆಲಸ ಬರಿ ಅಲಾರಾಂ ಮಾಡಬೇಕಿತ್ತು. ಮೊದಲು ಸ್ನಾನಕ್ಕೆ ಹೋಗೋಕೆ ತಮ್ಮ ,ತಂಗಿ ಜೊತೆ ಕಾಂಪಿಟೆಷನ್ ಆದ್ರೆ ಇನ್ನು ಇಲ್ಲಿ ಹೊಸ ಮುಖಗಳ ಜೊತೆ ಪೈಪೋಟಿ ಕೊಡಬೇಕು,
ತಿಂಡಿ ಊಟದ ಸಮಯ ಬಂದಾಗ ಅಮ್ಮ ಭಾರಿ ನೆನಪಾಗ್ತಿದ್ಳು , ಕಾಲೇಜು ಹೋಗುವ ಟೈಂ ಬಂದಾಗ ಅಮ್ಮ ಅಪ್ಪ “ಹೋಗ್ ಬರ್ತೇನೆ” ಅನ್ನೋ ಮಾತು ಬಾಯಿತುದಿಲಿದ್ರು ಹೇಳೋಕೆ ಅವ್ರು ಹಲವಾರು ಮೈಲಿ ದೂರದಲ್ಲಿದ್ರು. ಅದು ಮಳೆಗಾಲ ಆಗಿದ್ರಿಂದ ಕೊಡೆಯನ್ನು ಮರೆತರೂ ನನ್ನನ್ನು ಹಿಂಬಾಲಿಸಿ ತಂದು ಕೊಡೋಕೆ ಅಮ್ಮ ಜೊತೆಗಿರಲಿಲ್ಲ, ಬಸ್ ತಪ್ಪಿ ಹೋದ್ರೆ ಸೂಪರ್ ಮ್ಯಾನ್ ತರ ಬೈಕ್ ನಲ್ಲಿ ಅದನ್ನ ಓವರ್ ಟೇಕ್ ಮಾಡಿ ತಲುಪಿಸೋಕೆ ಅಪ್ಪ ಬಳಿ ಇರ್ಲಿಲ್ಲ, ಇನ್ನು ಕಾಲೇಜು ಮುಗಿಸಿ ಮನೆಗೆ ಬಂದು ಒಟ್ಟಿಗೆ ತಮ್ಮ ತಂಗಿರ ಜೊತೆ ತಿಂಡಿ ತಿನ್ನುತ್ತಾ ಆಟ ಆಡೋ ಅವಕಾಶವೂ ಕಣ್ಮರೆ ಆಗಿತ್ತು!
ಮನಸ್ಸಿಗಾದರೂ ಸಮಾಧಾನ ಆಗಲಿ ಅಂತ ಕರೆ ಮಾಡಿದ್ರೆ, ತಂಗಿ ಧ್ವನಿ ಕೇಳಿ ಅದೇ ಮನಸ್ಸು ಭಾರ ಆಗ್ತಿತ್ತು! ತಮ್ಮನ ಕೀಟಲೆಯ ನೆನಪು ಕಾಟ ಕೊಡ್ತಿತ್ತು! ನೋಡ ನೋಡ್ತಾ ರಾತ್ರಿ ಊಟದ ನಡುವೇನೇ ಎಲ್ಲ ಹೊಸ ಮುಖಗಳು ಪರಿಚಯವಾಗೋಕೆ ಶುರುವಾಯ್ತು. ಹೊಸತೊಂದು ಬಳಗ ಅಲ್ಲಿ ಚಿಗುರೊಡೆಯೊಕೆ ಪ್ರಾರಂಭವಾಯ್ತು!
ಮಲಗೋ ಸಮಯ ಹತ್ತಿರ ಆಗ್ತಾ ಇದ್ದ ಹಾಗೇ ಮನೆ ನೆನಪು ನೆತ್ತಿ ಏರ್ತಾ ಹೋಯ್ತು! ಅಪ್ಪನ ಕತೆಗಳು ಕಿವಿಯಲ್ಲಿ ಗುಯ್ಗುಡ್ತಾ ಇದ್ವು , ಅಮ್ಮನ ಹಾಡು ಕೇಳದೆ ನಿದ್ದೇನೆ ಮರೆಯಾಯ್ತು! ರಾತ್ರಿ ಹೊದಿಸಿ ತಲೆಸವರಿ ಮಲಿಸುವ ಅಪ್ಪನ ಕೈಗಳು ದೂರದಿಂದಲೇ ಮಗಳನ್ನ ನೆನಪಿಸುತ್ತಿತ್ತು!
♥ ಕ್ಷಣ ಕ್ಷಣವೂ ಹೊಸತಾಯ್ತು, ಭಾವನೆಗಳಿಗೆ ಮಳೆಯಾಯ್ತು:
ಪ್ರತಿ ದಿನ ಪ್ರತಿ ಕ್ಷಣ ಹೊಸತಾದ ಅನುಭವ ,ಹೊಸತಾದ ದಿನಚರಿಯೇ ಸೃಷ್ಟಿಯಾಗಿಬಿಟ್ಟಿತ್ತು! ಆಗಾಗ ಮನೆಯ ನೆನಪು ಹಠಾತ್ತನೆ ಕಾಡುತ್ತಿತ್ತು! ಇನ್ನು ಆರೋಗ್ಯ ಕೆಟ್ಟಸಮಯದಲ್ಲಿ ಕಳೆದ ಒಂದೊಂದು ನಿಮಿಷ ಕೂಡ ಕಠೋರವಾಗಿತ್ತು! ಆಗ ಅಮ್ಮನ ಧೈರ್ಯದ ಮಾತುಗಳೇ ಮದ್ಧಾಗಿ ಪರಿಣಮಿಸ್ತಾ ಇದ್ವು!
ಅಪ್ಪ ಅಮ್ಮಂದಿರ ಜೊತೆ ಇದ್ದಾಗ ಹಣದ ಮಹತ್ವ ತಿಳಿಯದೇ ವ್ಯವಹರಿಸೋ ನಮಗೆ ಹಣದ ಬೆಲೆ ಏನು ಎಂಬ ಪಾಠ ಮನದಟ್ಟವಾಯ್ತು! ಕೆಲವೊಮ್ಮೆ ಪರೀಕ್ಷೆಗಳು, ಒತ್ತಡಗಳ ಜೊತೆ ಸಾಥ್ ನೀಡೋ ಕುಟುಂಬ ದೂರ ಇದ್ದಾಗ ಮನಸ್ಸಿಗೆ ಅಗೋ ಕಸಿವಿಸಿ ಒಂದಲ್ಲ ಎರಡಲ್ಲ ಹೇಳ್ತಾ ಹೋದರೆ ಬರೆದಷ್ಟು ಸಾಲಲ್ಲ
ಆದ್ರೆ ಯಾವುದೇ ಸಮಯ ಇರಲಿ ಮನಸ್ಸು ಹೆದರಿ ಕೂತಾಗ, ಕಳವಳ ಆದಾಗ ಜೊತೆಯಾದವಳು ನನ್ ಗೆಳತಿ. ಬಹುಶಃ ಅವಳ ಬಗ್ಗೆ ನಿಮ್ಗೆ ಹೇಳದೆ ಈ ಪುಟ್ಟ ಕಥೆ ಸಂಪೂರ್ಣ ಆಗಲ್ಲ, ಅವಳು ಮಾಡೋ ಚೇಷ್ಟೆ, ನಮ್ಮ ನಗೆ ಚಟಾಕಿ, ಸಾಂತ್ವನ ಹೇಳೋ ಪರಿ ಎಲ್ಲೋ ಒಂದು ಕಡೆ ನಾ ಮನೆಯಲ್ಲೇ ಇದೇನಾ ಅಂತನ್ನಿಸಿ ಬಿಡುತ್ತಿತ್ತು. ನಮ್ಮ ಗೆಳೆತನದ “ಸ್ವಾತಂತ್ರ್ಯ” ಕೂಡ ದಿನೇ ದಿನೇ ಹೆಮ್ಮರವಾಯ್ತು.
ಕೊನೆದಾಗಿ ಹೇಳೋದಾದ್ರೆ ಜೀವನದ ಈ ಘಟ್ಟವನ್ನು ಎಲ್ಲರೂ ತಲುಪಲೇ ಬೇಕು! ಈ ಹಾದೀಲಿ ಕೆಲವರು ನಮಗೆ ಮರುಭೂಮಿಯ ಓಯಸಿಸ್ ಆದ್ರೆ ಇನ್ನು ಕೆಲವರು ಮರೀಚಿಕೆಗಳಾಗ್ತಾರೆ, ಕೆಲವು ಕ್ಷಣಗಳು ಜ್ವಾಲಾಮುಖಿಯಾದರೆ ಇನ್ನು ಕೆಲವು ಕ್ಷಣಗಳು ಮಳೆಹನಿಗಳಾಗ್ತಾವೆ, ನಾವ್ ಎಲ್ಲೆ ಇರ್ಲಿ ಹೇಗೆ ಇರ್ಲಿ ನೆನಪಿನ ಬುತ್ತಿ ಮಾತ್ರ ಎಂದಿಗೂ ಜೊತೆಯಲಿರಲಿ! ಕೊನೆಗೆ ಅದನ್ನೇ ಅಲ್ವೇ ನಾವು ಮನೆಗೆ ಹೊತ್ತು ತರೋದು. ಹೌದು ನೋಡಿ! ತಿಳಿದಷ್ಟು ಸುಲಭ ಅಲ್ಲ ಈ ದಾರಿ, ಅಗಲೋ ಮುನ್ನ ಅನುಭವಿಸಿ ಒಂದ್ಸಾರಿ!