ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್ ಅವರ ನೇತೃತ್ವದಲ್ಲಿ ಕಿಂಡ್ರೆಲ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಸಹಯೋಗದೊಂದಿಗೆ 24 ಗಂಟೆಗಳ ಗ್ರ್ಯಾಂಡ್ ಫಿನಾಲೆ – ಕೋಡ್4ಭಾರತ್ ಹ್ಯಾಕಥಾನ್ ನ್ನು ಸೆ.23 ಮತ್ತು ಸೆ.24 ರಂದು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕಿಂಡ್ರೆಲ್ ಸಂಸ್ಥೆಯ ಇಂಡಿಯಾ ಡೆಲಿವರಿ ಲೀಡರ್ಶಿಪ್ ಉಪಾಧ್ಯಕ್ಷ ಶಂಕರ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಿಂಡ್ರೆಲ್ ಸಂಸ್ಥೆಯ ನಿರ್ದೇಶಕ ಡಾ. ರಾಜ್ ಮೋಹನ್ ಸಿ ಮತ್ತು ಮೈಕ್ರೋಸಾಫ್ಟ್ ನ ತಾಂತ್ರಿಕ ಕಲಿಕೆಯ ನಾಯಕಿ ಗುಂಜನ್ ಕೆ ಅವರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ 25 ಕ್ಕೂ ಹೆಚ್ಚು ಕಾಲೇಜುಗಳ 24,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರುವುದಲ್ಲದೆ, 13,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಚಾಲಿತ ಕಲಿಕಾ ಟ್ರ್ಯಾಕ್ ಗಳ ಮೂಲಕ ತಮ್ಮ ಸರ್ಟಿಫಿಕೇಶನ್ಸ್ ಗಳಿಸಿದ್ದಾರೆ. ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ ಜಂಟಿಯಾಗಿ ನಡೆಸುವ ಈ ಉಪಕ್ರಮವು ರಾಷ್ಟ್ರದಾದ್ಯಂತ ಭವಿಷ್ಯಕ್ಕೆ ಸಿದ್ಧವಾದ ಪ್ರತಿಭೆಗಳನ್ನು ರೂಪಿಸುತ್ತಿದೆ.












