ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಎ ಐ ಆಧಾರಿತ ಶ್ರವಣಸಾಧನ ವಿನ್ಯಾಸ:

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೂರ್ಣಿತ, ಅನನ್ಯ ಆಚಾರ್ಯ, ಜತ್ತನ್ ಶ್ರದ್ಧಾ ವಸಂತ್ ಮತ್ತು ದೀಪ್ತಿ ಇವರು ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಪವಿತ್ರ ಪೂರ್ಣಿಮಾ ಮತ್ತು ರಘುನಾಥ್ ಇವರ ಮಾರ್ಗದರ್ಶನದಲ್ಲಿ ಎ ಐ ಆಧಾರಿತ ಶ್ರವಣ ಸಾಧನ “ಹಿಯರ್ ಪ್ಯೂಶನ್” ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಶ್ರವಣ ದೋಷವು ಪರಿಣಾಮಕಾರಿ ಸಂವಹನ ಮತ್ತು ಜೀವನದ ಗುಣಮಟ್ಟ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಮಾನ್ಯ ಶ್ರವಣ ಸಾಧನಗಳು ಸಾಮಾನ್ಯವಾಗಿ ಎಲ್ಲಾ ಶಬ್ದಗಳನ್ನು ಸಮಾನವಾಗಿ ಕೇಳಿಸುವುದರಿಂದ ಗದ್ದಲದ ವಾತಾವರಣದಲ್ಲಿ ಮಾತುಗಳನ್ನು ಸ್ಪಷ್ಟವಾಗಿ ಗುರುತಿಸುವುದು ಬಳಕೆದಾರರಿಗೆ ಕಷ್ಟಕರವಾಗುತ್ತದೆ. ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಗಳು ಅನಗತ್ಯ ಹಿನ್ನಲೆ ಶಬ್ದವನ್ನು ಕಡಿಮೆ ಮಾಡುತ್ತಾ ಮಾತಿನ ಸ್ಪಷ್ಟತೆಯನ್ನು ಹೆಚ್ಚಿಸುವ ಶ್ರವಣ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಯೋಜನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಅನುಮೋದನೆ ದೊರೆತಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಿ.ಇ.ಒ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.