ಅಹಮದಾಬಾದ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದಲ್ಲಿ ಮಹಿಳೆಯೊಬ್ಬರು ಪಾರಾಗಿದ್ದು ಅಚ್ಚರಿ ಮೂಡಿಸಿದೆ.
ಭೂಮಿ ಚೌಹಾಣ್ ಅವರು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ.
ಏರ್ಪೋರ್ಟ್ಗೆ 10 ನಿಮಿಷ ತಡ:
ಈ ವಿಚಾರ ಕೇಳಿ ನನಗೆ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು ತುಂಬಾ ಹೊತ್ತು ಅದೇ ಆಘಾತದಲ್ಲಿದ್ದೆ. ಕೇವಲ 10 ನಿಮಿಷ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿಸಿಕೊಂಡು ಬದುಕುಳಿದೆ. ನನ್ನ ನೆಚ್ಚಿನ ದೇವರಾದ ಗಣಪತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಗಣಪತಿ ಬಪ್ಪಾ ನನ್ನನ್ನು ಉಳಿಸಿದ ಎಂದು ಹೇಳಿಕೊಂಡಿದ್ದಾರೆ.
ಭೂಮಿ ತಮ್ಮ ಪತಿಯೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ರಜೆ ಇದ್ದ ಕಾರಣ ಭಾರತಕ್ಕೆ ಬಂದಿದ್ದರು. ಅವರ ಪತಿ ಈಗ ಬ್ರಿಟನ್‌ನಲ್ಲಿದ್ದಾರೆ. ಭೂಮಿ ಎರಡು ವರ್ಷಗಳ ಹಿಂದೆ ಲಂಡನ್‌ಗೆ ತೆರಳಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದರು.
ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಜೂ.12 ರಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ತಕ್ಷಣ ಪತನಗೊಂಡಿತು, ಈ ಅಪಘಾತದಲ್ಲಿ 241 ಮಂದಿ ಮೃತಪಟ್ಟಿದ್ದರು.












