ಏ.1 ರಿಂದ 30 : ಆಗುಂಬೆ ಘಾಟಿ ಬಂದ್, ಉಡುಪಿ ಜಿಲ್ಲಾಧಿಕಾರಿ ಆದೇಶ

ಉಡುಪಿ :ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟ್ ಭಾಗದಲ್ಲಿ ಶಾಶ್ವತ ದುರಸ್ಥಿಗೊಳಿಸಲು ಏ. 1 ರಿಂದ 30 ರ ವರೆಗೆ ಘಾಟ್ ರಸ್ತೆಯ ಮೂಲಕ ಹಾದು ಹೋಗುವ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ಹಾಗೂ ಆ ಅವಧಿಯಲ್ಲಿ ಸಂಚರಿಸುವ ಲಘು ವಾಹನಗಳಾದ ಸಾಮಾನ್ಯ ಬಸ್ಸ್‍ಗಳು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು, ಉಡುಪಿ- ಕಾರ್ಕಳ- ಮಾಳ- ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169) ಮಾರ್ಗದಲ್ಲಿ ಸಂಚರಿಸುವಂತೆ ಹಾಗೂ ಭಾರಿ ವಾಹನಗಳಾದ ರಾಜಹಂಸ, ಐರಾವತ ಬಸ್ಸುಗಳು, ಖಾಸಗಿ ಲಕ್ಸುರಿ ಬಸ್ಸುಗಳು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳು ಉಡುಪಿ-ಕುಂದಾಪುರ-ಸಿದ್ಧಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು, ಘಾಟಿ ರಸ್ತೆಯ ದುರಸ್ಥಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಸಮರೋಪಾದಿಯಲ್ಲಿ ಏ. 1 ರಿಂದ ಘಾಟಿ ರಸ್ತೆಯ ದುರಸ್ಥಿ ಕಾರ್ಯವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.