ಎಚ್​ಪಿಸಿಎಲ್​ನೊಂದಿಗೆ ಒಪ್ಪಂದ : ದೇಶಾದ್ಯಂತ ಬ್ಯಾಟರಿ ಸ್ವ್ಯಾಪಿಂಗ್ ಕೇಂದ್ರ ಆರಂಭಿಸಲಿದೆ ಗೊಗೊರೊ

ಮುಂಬೈ: ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಬ್ಯಾಟರಿ ವಿನಿಮಯ ಕಂಪನಿ ಗೊಗೊರೊ ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಬ್ಯಾಟರಿ ವಿನಿಮಯ (battery swapping) ಕೇಂದ್ರಗಳನ್ನು ಸ್ಥಾಪಿಸಲು ಎಚ್​​​​​ಪಿಸಿಎಲ್ ನೊಂದಿಗೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸೋಮವಾರ ತಿಳಿಸಿದೆ.ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಸಂಸ್ಥೆಯಾದ ಎಚ್​ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) 21,000 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.ಒಪ್ಪಂದದ ಭಾಗವಾಗಿ, ದೇಶಾದ್ಯಂತ ಎಚ್​ಪಿಸಿಎಲ್​ನ ಚಿಲ್ಲರೆ ಮಳಿಗೆಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ಗೊಗೊರೊ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ವಿಶಾಲವಾದ ಬ್ಯಾಟರಿ ವಿನಿಮಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಜಾಗತಿಕ ಮಟ್ಟದ ಬ್ಯಾಟರಿ ಸ್ವ್ಯಾಪಿಂಗ್ ಕಂಪನಿಯಾಗಿರುವ ಗೊಗೊರೊ ಎಚ್​ಪಿಸಿಎಲ್ ಸಹಯೋಗದಲ್ಲಿ ಭಾರತದಲ್ಲಿ ಬ್ಯಾಟರಿ ಸ್ವ್ಯಾಪಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ.

ಭಾರತವು ತನ್ನ ನಗರ ದ್ವಿಚಕ್ರ ವಾಹನ ಸಾರಿಗೆ ವ್ಯವಸ್ಥೆಯಲ್ಲಿ ಬೃಹತ್ ಸಂರ್ಖಯೆಯಲ್ಲಿ ವಿದ್ಯುತ್ ವಾಹನಗಳ ಬಳಕೆಯನ್ನು ಆರಂಭಿಸುವ ರೂಪಾಂತರದ ಹಂತದಲ್ಲಿದೆ ಮತ್ತು ಬ್ಯಾಟರಿ ವಿನಿಮಯವು ಇದಕ್ಕೆ ನಿರ್ಣಾಯಕ ಅಂಶವಾಗಿದೆ. ಹೀಗಾಗಿ ಬ್ಯಾಟರಿ ವಿನಿಮಯ ಮೂಲಸೌಕರ್ಯ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಎಲ್ಲರೂ ಮುಕ್ತವಾಗಿ, ಸುಲಭವಾಗಿ ಬಳಸಬಹುದಾದ ಮತ್ತು ಸ್ಕೇಲೆಬಲ್ ಬ್ಯಾಟರಿ ವಿನಿಮಯ ಮತ್ತು ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆ ರಚಿಸಲು ಗೊಗೊರೊ ಭಾರತೀಯ ವ್ಯಾಪಾರ ಸಮುದಾಯ, ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಗಳೊಂದಿಗೆ ಕೈಜೋಡಿಸುತ್ತಿದೆ ಎಂದು ಅವರು ಹೇಳಿದರು.
“ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಸಾವಿರಾರು ಗೊಗೊರೊ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ನಾವು ಎಚ್​ಪಿಸಿಎಲ್​ನೊಂದಿಗೆ ಸಹಭಾಗಿತ್ವವನ್ನು ಘೋಷಿಸುತ್ತಿದ್ದೇವೆ” ಎಂದು ಗೊಗೊರೊ ಸಂಸ್ಥಾಪಕ ಮತ್ತು ಸಿಇಒ ಹೊರೇಸ್ ಲ್ಯೂಕ್ ಹೇಳಿದರು.

“ಎಚ್​ಪಿಸಿಎಲ್ ಮತ್ತು ಗೊಗೊರೊ ದ್ವಿಚಕ್ರ ವಾಹನಗಳಿಗೆ ವಿಶಾಲವಾದ ಬ್ಯಾಟರಿ ವಿನಿಮಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಪಾಲುದಾರಿಕೆ ಹೊಂದಿವೆ. ಬ್ಯಾಟರಿ ಸ್ವ್ಯಾಪಿಂಗ್ ಎಂದರೆ ಚಾರ್ಜಿಂಗ್​ ಮಾಡುವುದಕ್ಕೆ ಕಾಯುವುದರ ಬದಲು ಡಿಸ್ಚಾರ್ಜ್ ಆದ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಗೆ ವಿನಿಮಯ ಮಾಡಿಕೊಳ್ಳುವ ವಿಧಾನವಾಗಿದೆ.ಇದು ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ವ್ಯವಸ್ಥೆ ಬೆಳೆಸಲಿದೆ” ಎಂದು ಎಚ್​ಪಿಸಿಎಲ್​ನ ಮಾರ್ಕೆಟಿಂಗ್ ನಿರ್ದೇಶಕ ಅಮಿತ್ ಗರ್ಗ್ ಹೇಳಿದರು. ಇಲ್ಲಿಯವರೆಗೆ ಸುಮಾರು 500 ಮಿಲಿಯನ್ ಬ್ಯಾಟರಿ ಸ್ಯಾಪಿಂಗ್​ಗಳನ್ನು ಸಾಧಿಸಿರುವ ಗೊಗೊರೊ, ಎಚ್​ಪಿಸಿಎಲ್ ಅಳವಡಿಸಿಕೊಳ್ಳಬಹುದಾದ ಮತ್ತು ಅನುಕರಿಸಬಹುದಾದ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಗರ್ಗ್ ತಿಳಿಸಿದರು.