ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮತ್ತು ಕಾಳಾವರ ವಿ.ಎಂ ಶೆಟ್ಟಿ ಸರ್ಕಾರಿ ಪ್ರ.ದ.ಕಾಲೇಜು ನಡುವೆ ಐಟಿ ಮತ್ತು ಬಿ ಎಫ್ ಎಸ್ ಐ ಕ್ಷೇತ್ರದ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಒಪ್ಪಂದ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಕಾಳಾವರ ವಿ.ಎಂ ಶೆಟ್ಟಿ ಸರ್ಕಾರಿ ಪ್ರ.ದ.ಕಾಲೇಜು ವಿದ್ಯಾರ್ಥಿಗಳಿಗೆ ಐಟಿ ಮತ್ತು ಬ್ಯಾಂಕಿಂಗ್, ಫೈನಾನ್ಶಿಯಲ್ ಕ್ಷೇತ್ರದಲ್ಲಿ ಬಹುಬೇಡಿಕೆಯ ಜೂನಿಯರ್ ಸಾಫ್ಟ್ ವೇರ್ ಡೆವಲಪರ್ ಮತ್ತು ಬ್ಯುಸಿನೆಸ್ ಕರೆಸ್ಪೋ0ಡೆನ್ಸ್ ಆಂಡ್ ಬ್ಯುಸಿನೆಸ್ ಫೆಸಿಲಿಟೆಟರ್ ಜಾಬ್ ರೋಲ್ ಗಳಿಗೆ ತರಬೇತಿಗಳನ್ನು ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ನೀಡಲು ಇಂದು ಒಪ್ಪಂದ ಮಾಡಲಾಯ್ತು.

ಈ ಒಪ್ಪಂದದಂತೆ ಉನ್ನತಿ ಸಂಸ್ಥೆಯು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿರುವ ಶ್ರೀ ಕಾಳಾವರ ವಿ.ಎಂ ಶೆಟ್ಟಿ ಸರ್ಕಾರಿ ಪ್ರ.ದ.ಕಾಲೇಜಿನ ಬಿ.ಕಾಂ, ಬಿಎ, ಬಿಎಸ್ಸಿ, ವಿದ್ಯಾರ್ಥಿಗಳಿಗೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಬ್ಯಾಂಕಿಂಗ್, ಫೈನಾನ್ಶಿಯಲ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗವಕಾಶಗಳಿರುವ ತರಬೇತಿಗಳನ್ನು ಉಚಿತವಾಗಿ ನೀಡಿ ನಂತರ ಉದ್ಯೋಗವಕಾಶವನ್ನೂ ಒದಗಿಸಲು ಒಪ್ಪಿಕೊಂಡಿದೆ.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉನ್ನತಿಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ, “ಪ್ರಪಂಚದ ಅತಿ ಯುವ ದೇಶವಾಗಿರುವ ನಮ್ಮ ದೇಶದಲ್ಲಿ ವಿದ್ಯಾರ್ಥಿಗಳನ್ನು ಕೌಶಲ್ಯ ಭರಿತರನ್ನಾಗಿಸಿ ಉದ್ಯೋಗಾವಕಾಶ ಸೃಷ್ಟಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ನಗರ ಪ್ರದೇಶದ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಲು ತರಬೇತಿಗಳು ಅತ್ಯವಶ್ಯಕ.ಇಂತಹ ತರಬೇತಿಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ನಿರ್ಮಿಸಬಹುದು. ಒಂದು ವಿದ್ಯಾರ್ಥಿ ಉತ್ತಮ ಉದ್ಯೋಗ ಪಡೆದರೆ, ಒಂದು ಕುಟುಂಬಕ್ಕೆ ಆಧಾರವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಕಾಲೇಜುಗಳೊಂದಿಗೆ ಇಂತಹ ತರಬೇತಿಗಳ ಮೂಲಕ ಸಹಕರಿಸಲು ಬದ್ಧವಾಗಿದೆ” ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್ ನಾಯಕ್ ರವರು ಮಾತನಾಡಿ,” ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಉನ್ನತಿ ಸಂಸ್ಥೆಯು ಉತ್ತಮ ಭವಿಷ್ಯದ ತರಬೇತಿಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.ಇಂತಹ ತರಬೇತಿಗಳು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪರಿಣಾಮಕಾರಿಯಾಗುತ್ತದೆ. ನಮ್ಮ ಸಂಸ್ಥೆ ಅವರಿಗೆ ಅಭಾರಿಯಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ತರಬೇತಿಯ ವಿವರಗಳನ್ನು ತರಬೇತುದಾರ ನವೀನ್ ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾಲೇಜಿನ ಪ್ರಾಧ್ಯಾಪಕ ರಾಮರಾಯ ಆಚಾರ್ಯ, ನಾಗರಾಜ, ಸಂತೋಷ್ ನಾಯಕ್, ಉನ್ನತಿ ಸಂಸ್ಥೆಯ ರಾಜೇಶ್, ಕಾಲೇಜಿನ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.