ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಮತ್ತು ಅರ್ಹಿತ ಅಗ್ರೋಬೋಟ್ ಪ್ರೈವೇಟ್ ಲಿಮಿಟೆಡ್ ನಡುವೆ ಒಡಂಬಡಿಕೆ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವು ಶಿಕ್ಷಣ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಅರ್ಹಿತಾ ಅಗ್ರೋಬೋಟ್ ಪ್ರೈವೇಟ್, ಲಿಮಿಟೆಡ್ ಸಂಸ್ಥೆಯೊಂದಿಗೆ ಇತ್ತೀಚಿಗೆ ಒಡಂಬಡಿಕೆಗೆ ಸಹಿ ಹಾಕಿತು.

ಅತ್ಯಾಧುನಿಕ ಕೃಷಿ ತಂತ್ರಜ್ಞಾನ, ಸ್ವಯಂಚಾಲಿತ ವ್ಯವಸ್ಥೆ ಮತ್ತು ರೊಬೋಟಿಕ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅರ್ಹಿತಾ ಅಗ್ರೋಬೋಟ್ ಸಂಸ್ಥೆಯು, ಬುದ್ಧಿವಂತ ಹಾಗೂ ಸುಸ್ಥಿರ ಕೃಷಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪರಿಣತಿಯನ್ನು ಹೊಂದಿದೆ.

ಈ ಒಡಂಬಡಿಕೆಯು ಬೋಧನೆ, ಕಲಿಕೆ, ಸಂಶೋಧನೆ ಮತ್ತು ಸುಧಾರಿತ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವಿಕೆಯಲ್ಲಿ ದೀರ್ಘಕಾಲೀನ ಸಹಕಾರಕ್ಕಾಗಿ ಒಂದು ಸಮಗ್ರ ಚೌಕಟ್ಟನ್ನು ಸೃಷ್ಟಿಸುತ್ತದೆ. ಈ ಒಪ್ಪಂದದ ವಿಶಾಲ ವ್ಯಾಪ್ತಿಯು ಪರಸ್ಪರ ತಾಂತ್ರಿಕ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಉಪಕ್ರಮಗಳು, ಸಲಹಾ ಸೇವೆಗಳು ಮತ್ತು ಜಂಟಿ ಅನುದಾನಿತ ಯೋಜನೆಗಳ ಪ್ರಸ್ತಾಪಗಳನ್ನು ಒಳಗೊಂಡಿದೆ. ಇದಲ್ಲದೆ ಇದು ಇಂಟರ್ನ್‍ಶಿಪ್‍ಗಳು, ಕೈಗಾರಿಕಾ ತರಬೇತಿ ಕಾರ್ಯಕ್ರಮಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಪರಿಣಿತರ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ವಿಶೇಷ ಕೌಶಲ್ಯಾಭಿವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ.

ಇದರೊಂದಿಗೆ ಈ ಉದ್ಯಮ – ಸಂಸ್ಥೆಗಳ ನಡುವಿನ ಸಂವಹನವು ಪ್ರಸ್ತುತ ಕೈಗಾರಿಕಾ ಮಾನದಂಡಗಳಿಗೆ ಅನುಗುಣವಾಗಿ ಶೈಕ್ಷಣಿಕ ಪಠ್ಯಕ್ರಮವನ್ನು ಸಮೃದ್ಧಗೊಳಿಸಲು, ವಿದ್ಯಾರ್ಥಿಗಳ ಪ್ರಮುಖ ಪ್ರಾಜೆಕ್ಟ್‍ಗಳಿಗೆ ಬೆಂಬಲ ನೀಡಲು ಮತ್ತು ನವೀನ, ಸಮುದಾಯ–ಕೇಂದ್ರಿತ ಕೃಷಿ – ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.