ಬೆಂಗಳೂರು: ಅಗ್ನಿಪಥ್ ಯೋಜನೆಯಡಿ ಅಲ್ಪಾವಧಿ ಒಪ್ಪಂದದಡಿಯಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ನೇಮಕಗೊಂಡು ಹಿಂತಿರುಗುವ ಅಗ್ನಿವೀರ್ ಯೋಧರಿಗೆ ರಾಜ್ಯ ಪೋಲೀಸ್ ಇಲಾಖೆ ನೇಮಕಾತಿಯಲ್ಲಿ ಆದ್ಯತೆ ನೀಡಲು ರಾಜ್ಯ ಸರ್ಕಾರ ಯೋಜಿಸಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಹೇಳಿದ್ದಾರೆ.
ದೇಶದ ಕೆಲವು ಭಾಗಗಳಲ್ಲಿ ಅಗ್ನಿಪಥ್ ಕುರಿತಾಗಿ ಹಿಂಸಾತ್ಮಕ ಪ್ರತಿಭಟನೆಯನ್ನು ಕೈಗೊಳ್ಳುವಂತೆ ಮಿಲಿಟರಿ ಸೇವಾ ಆಕಾಂಕ್ಷಿಗಳನ್ನು ಪ್ರಚೋದಿಸುವ ಹಿಂದೆ ಯಾರಿದ್ದಾರೆ ಎಂಬುದನ್ನು ಕೇಂದ್ರ ಮತ್ತು ರಾಜ್ಯಗಳು ಪರಿಶೀಲಿಸಬೇಕು. ಭವಿಷ್ಯದಲ್ಲಿ ಏನಾದರೂ ಸಂಭವಿಸಬಹುದು ಎಂಬ ಭಯವನ್ನು ವ್ಯಕ್ತಪಡಿಸುವವರು ರೈಲುಗಳು ಮತ್ತು ಸಾರ್ವಜನಿಕ ಆಸ್ತಿಗಳಂತಹ ವಸ್ತುಗಳನ್ನು ಸುಡಬಾರದು, ಇದು ಹೊಸ ಯೋಜನೆಯಾಗಿದೆ. ಈ ದೇಶದಲ್ಲಿ ಯಾವುದೇ ಬದಲಾವಣೆಯನ್ನು ಬಯಸದ ಕೆಲವು ವಿಭಾಗಗಳಿವೆ, ಇಂತಹ ವಿಷಯಗಳ ಹಿಂದೆ ಅವರಿದ್ದಾರೆ ಎಂದು ಜ್ಞಾನೇಂದ್ರ ಹೇಳಿದ್ದಾರೆ.
ಮಿಲಿಟರಿಯಲ್ಲಿ ತರಬೇತಿ ಪಡೆದ ಸಿಬ್ಬಂದಿಗಳನ್ನು ಪೊಲೀಸ್ ಸೇವೆಗಳಿಗೆ ಸೇರಿಸಲು ನಾವು ಯೋಜಿಸಿದ್ದೇವೆ, ಅದು ನಮಗೆ ಸಹಾಯ ಮಾಡಲಿದೆ. ಅವರು ವಿವಿಧ ಉದ್ಯೋಗಾವಕಾಶಗಳನ್ನು ಸಹ ಪಡೆಯಲಿದ್ದಾರೆ ಮತ್ತು ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಬಹುದು ಎಂದಿದ್ದಾರೆ.