ನಾಲ್ಕು ದಿನಗಳ ಕಾಲ ಮೈಸೂರಿನಲ್ಲಿ ಅಗ್ನಿವೀರ್ ಸೇನಾ ನೇಮಕಾತಿ 14 ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ: ರ‍್ಯಾಲಿಗೆ ಚಾಲನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಈ ರ‍್ಯಾಲಿಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು ಈಗಾಗಲೇ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರನ್ನು ಅಗ್ನಿವೀರ್ ರ‍್ಯಾಲಿಯಲ್ಲಿ ಮೊದಲ ದಿನ ಕ್ರೀಡಾ ಚಟುವಟಿಕೆ ಹಾಗೂ ಎರಡನೇ ದಿನ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನು ರ‍್ಯಾಲಿಗೆ 14 ಜಿಲ್ಲೆಗಳ 1723 ಸೇನಾ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಗ್ನಿವೀರ್ ನೇಮಕಾತಿ ಅಧಿಕಾರಿ ಗೌರವ್ ತಾಪ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.ಉದ್ಯೋಗಿಕಾಂಕ್ಷಿಗಳಿಗೆ ಭಾರತೀಯ ಸೇನಾ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಗ್ನಿವೀರ್ ಯೋಜನೆಯಡಿ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ ಆರಂಭವಾಗಿದೆ. ನಾಲ್ಕು ದಿನಗಳ ಕಾಲ ಈ ನೇಮಕಾತಿ ರ‍್ಯಾಲಿ ನಡೆಯಲಿದೆ. ಸೇನಾ ನೇಮಕಾತಿ ರ‍್ಯಾಲಿಯ ಮೊದಲನೇ ದಿನವಾದ ಇಂದು 559 ಮಂದಿಗೆ ದೈಹಿಕ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಆಯ್ಕೆಯಾದ 492 ಮಂದಿ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಇವರನ್ನು 5 ಬ್ಯಾಚ್​ಗಳಾಗಿ ವಿಂಗಡಣೆ ಮಾಡಿ ಪ್ರತಿ ಬ್ಯಾಚ್​ನಿಂದ 90 ಮಂದಿಯಂತೆ 1600 ಮೀಟರ್ ಓಟ, 9 ಅಡಿ ಉದ್ದ ಜಿಗಿತ, ಜಿಗ್ ಜಾಗ್ ಬ್ಯಾಲೆನ್ಸ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಯಿತು.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇಂದಿನಿಂದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಪ್ರಾರಂಭವಾಗಿದೆ. ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ

ಆಗಸ್ಟ್ 4 ರ ವರೆಗೆ ನಡೆಯುವ ನೇಮಕಾತಿ ರ‍್ಯಾಲಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಕೊಡಗು, ಕೋಲಾರ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ಒಟ್ಟು 14 ಜಿಲ್ಲೆಯ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ ವಿ. ರಾಜೇಂದ್ರ ಭೇಟಿ ನೀಡಿ ಆಯ್ಕೆ ಪ್ರಕ್ರಿಯೆ ಹಾಗೂ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ, ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.
ಅಭ್ಯರ್ಥಿಗಳ ವಾಸ್ತವ್ಯಕ್ಕೆ ವ್ಯವಸ್ಥೆ: ನಾಲ್ಕು ದಿನಗಳ ಕಾಲ ನಡೆಯುವ ಅಗ್ನಿವೀರ್ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಗರದ ನಂಜ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡು ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಅನ್ನ ದಾಸೋಹ ಮಾಡುವ ಬಾಣಸಿಗರನ್ನು ಅಭ್ಯರ್ಥಿಗಳಿಗೆ ಅಡುಗೆ ಮಾಡಲು ನೇಮಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಹಾಗೂ ಎನ್​ಸಿಸಿ ವತಿಯಿಂದ ಅಭ್ಯರ್ಥಿಗಳನ್ನು ವಾಸ್ತವ್ಯ ಸ್ಥಳದಿಂದ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ.