ಅಗ್ನಿಪಥ್ ನೇಮಕಾತಿ: ಜೂನ್ 24 ರಿಂದ ಭಾರತೀಯ ವಾಯುಪಡೆಯ ನೋಂದಣಿ ಪ್ರಕ್ರಿಯೆ ಆರಂಭ

ನವದೆಹಲಿ: ಭಾರತೀಯ ವಾಯುಪಡೆಯ ಅಗ್ನಿಪಥ್ ನೇಮಕಾತಿ ಯೋಜನೆಗೆ ನೋಂದಣಿಯು ಜೂನ್ 24 ರಿಂದ ಪ್ರಾರಂಭವಾಗಿ ಜುಲೈ 5ಕ್ಕೆ ಕೊನೆಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆಯು ಜುಲೈ 24ರಂದು ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ಆಕಾಂಕ್ಷಿಗಳು careerindianairforce.cdac.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅರ್ಹತೆ:
17.5 ವರ್ಷದಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು ನೋಂದಣಿ ಮಾಡಬಹುದು. ಈ ವರ್ಷಕ್ಕೆ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಏರಿಸಲಾಗಿದೆ. ಹೆಚ್ಚುವರಿ ಶೈಕ್ಷಣಿಕ ಅರ್ಹತೆಗಳು ಮತ್ತು ದೈಹಿಕ ಮಾನದಂಡಗಳು ಇದ್ದಲ್ಲಿ ಭಾರತೀಯ ವಾಯುಪಡೆಯು ಸೂಚಿಸಲಿದೆ. ಅಗ್ನಿವೀರ್‌ ಅಭ್ಯರ್ಥಿಗಳು ವೈದ್ಯಕೀಯ ಅವಶ್ಯಕತೆಗಳನ್ನು ಸಹ ಪೂರೈಸಬೇಕು. ಒಂದು ವೇಳೆ ಪೂರೈಸದಿದ್ದಲ್ಲಿ ಅವರನ್ನು ಸೂಕ್ತರೆಂದು ಪರಿಗಣಿಸಲಾಗುವುದಿಲ್ಲ. ದುರ್ಬಲ ವೈದ್ಯಕೀಯ ವರ್ಗದಲ್ಲಿ ಶಾಶ್ವತವಾಗಿ ಇರಿಸಲಾದ ಅಗ್ನಿವೀರರು ಯೋಜನೆಯಲ್ಲಿ ಮುಂದುವರಿಯಲು ಅರ್ಹರಾಗಿರುವುದಿಲ್ಲ.