ಮಂಗಳೂರು: ಗಡಿಯಲ್ಲಿ ನಿತ್ಯವೂ ತಂಟೆ ಎಬ್ಬಿಸುವ ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳಿಗೆ ಸೂಕ್ತ ಉತ್ತರ ನೀಡಲು ಸೇನೆಯಲ್ಲಿ ಮಹತ್ವದ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಅಸಂಖ್ಯ ಯುವಕರಲ್ಲಿ ಶಿಸ್ತು, ಸಂಯಮ, ಉತ್ತಮ ಭವಿಷ್ಯ ಮತ್ತು ಉದ್ಯೋಗಾವಕಾಶಕ್ಕೆ ಪೂರಕವಾಗಲಿದೆ. ಪಕ್ಷದ ಕಾರ್ಯಕರ್ತರು ಯುವ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡುವ ಮೂಲಕ ಯೋಜನೆಯನ್ನು ಬೆಂಬಲಿಸುವಂತೆ ಪ್ರೇರೇಪಿಸಬೇಕು ಎಂದು ಶಾಸಕ ಡಾ ಭರತ್ ವೈ ಶೆಟ್ಟಿ ಹೇಳಿದರು.
ಜನತಾ ಕಾಲನಿ ಬಿಜೆಪಿ ಶಕ್ತಿಕೇಂದ್ರ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ರಕ್ಷಣೆಯ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದ್ದು, ಇದು ನಾಚಿಕೆಗೇಡಿನ ವಿಷಯ, ಬಲಿಷ್ಠ ಭಾರತವನ್ನು ನಿರ್ಮಿಸುವುದು ಪಕ್ಷದ ಗುರಿಯಾಗಿದೆ ಎಂದರು. ಶಿಬಿರಗಳನ್ನು ನಡೆಸಿ ಜನರ ಮನೆ ಬಾಗಿಲಿಗೆ ಸರಕಾರಿ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಪಕ್ಷವು ಮಾಡುತ್ತಿದೆ. ಶಕ್ತಿಕೇಂದ್ರ ಮಟ್ಟದಲ್ಲೂ ಕಾರ್ಯಕರ್ತರು ಇದನ್ನು ಸಾಧಿಸಬೇಕೆಂದರು.