ಮದುವೆಯ ವಯಸ್ಸಾದ್ರೆ ನಿಮಗೂ ಹೀಗೆಲ್ಲಾ ಚಡಪಡಿಕೆ ಆಗ್ಬೋದು,ಇದ್ದವರೆಲ್ಲಾ ಹೀಗೆ ಪ್ರಶ್ನೆ ಕೇಳ್ಬೋದು : 90s ಹುಡುಗನೊಬ್ಬನ ಕಹಾನಿ


ಬರಹ-ಕುದ್ಯಾಡಿ ಸಂದೇಶ್ ಸಾಲ್ಯಾನ್

“ಮದುವೆಯ ವಯಸ್ಸಾಯಿತು. ಯಾರನ್ನಾದರೂ ನೋಡಿಕೊಂಡಿದ್ದೀಯೋ ಇಲ್ಲ ನಾವೇ ನೋಡಬೇಕೋ?” ಎಂದು ಹಿತೈಷಿಗಳು ಕೇಳುವಾಗ ದಿಗಿಲು, ಗಲಿಬಿಲಿ ಒಟ್ಟಿಗೆ ಉಂಟಾಗುತ್ತದೆ.

 ಹೇಗೋ ಕಷ್ಟ ಪಟ್ಟು ಕಾಲೇಜು ಮುಗಿಸಿ ಕೆಲಸ ಹಿಡಿದು, ಮತ್ತೆ ಕೊರೊನಾ ಕಾಟದಿಂದ ಹೈರಾಣಾಗಿ ಈಗ ಸುಧಾರಿಸಿಕೊಳ್ಳುತ್ತಿರುವಾಗ, ಮತ್ತೊಂದು ವೈರಸ್ ಬಂದು ಉಳಿದಿರುವುದನ್ನೂ ಕಿತ್ತುಕೊಳ್ಳುತ್ತದೋ ಎಂಬ ಆತಂಕದ ಮಧ್ಯೆ ದಿನಗಳು ಓಡುತ್ತಿರಬೇಕಾದರೆ ‘ಮದುವೆ’ ಎಂಬ ಸಂಗತಿಯೊಂದು ಕುಣಿದಾಡುತ್ತಿದೆ!

 ಲಗ್ನ ಇರುವಾಗಲೇ ಮದುವೆಯಾಗಬೇಕು. ಇಲ್ಲದಿದ್ದರೆ ಕಷ್ಟ ಎಂದು ಹಿರಿಯರು ಹೇಳುವಾಗ ಚಿಂತೆ ಕಾಡುತ್ತದೆ. ಹೆಣ್ಣು ಹುಡುಕಿ ಸುಸ್ತಾದ ಸೀನಿಯರ್ಸ್ ಮಾತು ಕೇಳುವಾಗ ‘ಕತೆ ಏನಪ್ಪ ಮುಂದೆ’ ಅನಿಸುತ್ತದೆ. ನೈಂಟೀಸ್ ಹುಡುಗರ ಜೂನಿಯರ್ಸ್ ಮದುವೆಯಾಗುತ್ತಿದ್ದಾರೆ, ಸಹಪಾಠಿ ಹುಡುಗಿಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ, ಇವರಿನ್ನೂ ಹುಡುಗಾಟದಲ್ಲಿದ್ದಾರೆ ಎಂದು ಫೇಸ್ಬುಕ್ ಮೀಮ್ಸ್ ಅಣಕಿಸುತ್ತಿವೆ.

 
ಇದರ ಮಧ್ಯೆ, ಮಾತನಾಡಿಸಿದರೆ ಮಾತ್ರ ತೂಕದ ಮಾತನಾಡುವ ಸ್ನೇಹಿತೆಯೋರ್ವಳು ಇದ್ದಕ್ಕಿದ್ದಂತೆ ಚೂಟಿಯಾಗಿ, “ವ್ಯಾಲೆಂಟೈನ್ಸ್ ಡೇ ಬರುತ್ತಿದೆ, ಏನಾದರೂ ವಿಶೇಷ ಉಂಟ?” ಎಂದು ಕೇಳುತ್ತಾಳೆ!? “ನನ್ನದೇನೂ ವಿಶೇಷವಿಲ್ಲ. ಬ್ಯಾಚುಲರ್ ನಾನು, ನಿಮ್ಮದೇನು ವಿಶೇಷ?” ಎಂದರೆ, “ನಾನೂ ಶುದ್ಧ ಬ್ಯಾಚುಲರ್” ಎನ್ನುತ್ತಾಳೆ. ಆಯಿತು ನನಗೇನು! ಬಹುಶಃ ನಾನು ಮಾತನಾಡಿಸುವುದು ಕಡಿಮೆಯಾಗಿರುವುದನ್ನು ಕಂಡು ಇವನು ಈಗ ಯಾರನ್ನಾದರೂ ಪ್ರೀತಿಸುತ್ತಿದ್ದಾನೇನೋ ಅದಕ್ಕೇ ಪತ್ತೆಯಿಲ್ಲ ಅನ್ನಿಸಿರಬಹುದು. ಆಕೆಗೆ ಲವ್ ಮ್ಯಾರೇಜಿಗೆ ಮನೆಯಲ್ಲಿ ಅನುಮತಿಯಿದೆಯಂತೆ. ಆದರೆ ಅದಕ್ಕೆ ಮನೆಯವರು ಗಡುವು ಕೊಟ್ಟಿದ್ದಾರೆ. ಅದರೊಳಗೆ ಲವ್, ಮದುವೆ ಆಗಬೇಕು. ಇಲ್ಲದಿದ್ದರೆ ಅವರೇ ಗಂಡು ನೋಡಿ ಮದುವೆ ಅರೇಂಜ್ ಮಾಡುತ್ತಾರಂತೆ (ಅರೇಂಜ್ಡ್ ಮ್ಯಾರೇಜ್)! ಸಮಸ್ಯೆಗಳು ನೋಡಿ- ಯಾವ್ಯಾವ ರೀತಿ ಇರುತ್ತವೆ!

“..ಲವ್ ಮಾಡಬೇಕಿತ್ತು ಮಾರಾಯ. ಈ ಕಾಲದಲ್ಲಿ ಹೆಣ್ಣು ಹುಡುಕುವುದು ಕಷ್ಟ” ಎಂದು ನೆರೆಹೊರೆಯವರು ಹೇಳಿದಾಗ, ಅಚ್ಚರಿಯೂ ಉಂಟಾಗಿ, ಇದನ್ನು ಕೆಲವು ವರ್ಷ ಮೊದಲೇ ಹೇಳಲೇನಾಗಿತ್ತು ಇವರಿಗೆ ಎಂದು ಅನ್ನಿಸುವುದಿದೆ. ಪ್ರೀತಿಸುವುದು ಎಂದರೆ ಒಂದು ದೊಡ್ಡ ವಿಷಯವಾಗಿದ್ದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನೈಂಟೀಸ್ ಕಿಡ್ ಆಗಿಯೇ ಉಳಿದು ಹೋಗಿ ಈಗ ಸದಾ ಬ್ಯಾಚುಲರ್ ಆಗಿಯೇ ಉಳಿಯಬೇಕಾಗಬಹುದೇ‌ನೊ ಎಂಬ ಅನುಮಾನವೂ ಕಾಡುತ್ತದೆ.

ಆದರೂ, ಒಂದೊಮ್ಮೆ, ಪಾಪ ಹುಡುಗ, ಬೇಸತ್ತಿದ್ದಾನೆ ಎಂದುಕೊಂಡು ಇಗೊ ನನ್ನ ಮಗಳನ್ನು ಮದುವೆಯಾಗು ಎಂದು ಯಾರಾದರೂ ಮುಂದೆ ಬಂದರೂ ಸಮಸ್ಯೆಯೇ! ಚಿನ್ನದ ದರ ಮುಗಿಲು ಮುಟ್ಟಿದೆ. ಕೂಡಿಟ್ಟ ಹಣವೂ ಇಲ್ಲ. ಬಂಗಾರವೂ ಇಲ್ಲ. ಯಾವ ವೈಟ್ ಗೋಲ್ಡ್ ಕೂಡ ನಮ್ಮ ಹಿಡಿಯದು. ಗೋಲ್ಡೂ ಇಲ್ಲ, ಬ್ಲ್ಯಾಕ್ ಮನಿಯೂ ಇಲ್ಲ. ಸಾಲ ಮಾಡದೆ ಮದುವೆ ಸಾಧ್ಯವೇ ಇಲ್ಲ. ಈಗಾಗಲೇ ಹಾಸಿ ಹೊದೆಯುವಷ್ಟು ಸಾಲಗಳಿರುವಾಗ ಮತ್ತೆ ಸಾಲ ಮಾಡುವ ಧೈರ್ಯವೂ ಯಾವುದೇ ಮೋಟಿವೇಶನ್ ಇಲ್ಲದೆ ಬರದು ಎನ್ನಿ!

ಹೆಣ್ಣು ಹುಡುಕುವುದೂ ಕಷ್ಟ. ಫ್ಯಾಷನ್‌, ಟ್ರೆಂಡ್ ಬದಲಾಗುತ್ತಿರುತ್ತದೆ. ಗಡ್ಡಧಾರಿಗಳಿಗೆ ಈಗ ಮಾರುಕಟ್ಟೆ ಇದೆ ಎಂಬ ಮಾಹಿತಿ ಇದೆ. ಶೀಘ್ರದಲ್ಲಿ ಪಟಾಯಿಸಿದರೆ ಬಚಾವ್. ಇಲ್ಲದಿದ್ದರೆ ಇನ್ಯಾವನೋ ಹಾರಿಸಿಕೊಂಡು ಹೋಗುತ್ತಾನೆ ಎಂಬುದು ಬಲ್ಲವರ ಮಾತು. ಹುಡುಗಿಯರೂ ಹುಡುಗರನ್ನು ಸುಲಭವಾಗಿ ಒಪ್ಪುವುದಿಲ್ಲ. ನಿರೀಕ್ಷೆಗಳು, ಷರತ್ತುಗಳು ಇರುತ್ತವಂತೆ.

ಈ ಎಲ್ಲ ಸವಾಲುಗಳ ಮಧ್ಯೆ ಓಡುವ ವಯಸ್ಸನ್ನು, ಅದರ ಜತೆಗೆ ಮುಂದೆ ಮುಂದೆ ಹೋಗುತ್ತಿರುವ ಹೊಟ್ಟೆಯನ್ನು ನಿಯಂತ್ರಿಸುವುದು ಹೇಗೆ ಎಂಬುದು ಹೆಚ್ಚುವರಿ ಸಮಸ್ಯೆ. ಜಿಮ್ ನಲ್ಲಿ ಹೊಟ್ಟೆ ಕರಗಿಸೋಣವೆಂದರೆ ಹಳ್ಳಿಯಲ್ಲಿದ್ದು ಜಿಮ್ ಗೆ ಹೋಗುವುದು ಹಳ್ಳಿ ಬದುಕಿಗೇ ಅವಮಾನ! (ಹೋಗಲು ಸಮಯವಿಲ್ಲ ಎಂಬುದನ್ನು ಯಾಕೆ ಹೇಳೋಣ!) ವಾರದ ರಜೆಯಲ್ಲಿ ಒಂದು ದಿನ ತೋಟದಲ್ಲಿ ಮೈಬಗ್ಗಿಸಿ ಕೆಲಸ ಮಾಡಲು ಆಲಸ್ಯ ಬಿಡುವುದಿಲ್ಲ.

ಜಿಮ್ ನಲ್ಲಿ ಎಲ್ಲರೂ ಏನೋ ಎತ್ತುವರೆಂದು ನಾವೂ ಎತ್ತಿ ಇಳಿಸಬಹುದು. ಆಗದೇನಿಲ್ಲ. ವಯಸ್ಸನ್ನಂತೂ ನಿಲ್ಲಿಸಲು ಆಗದು ಬಿಡಿ.

ಇದರ ಜತೆಗೆ, ಸ್ವಂತ ವಾಹನವೂ ಬೇಕು. ನಡೆದು ಹೋಗುವವರಿಗೆ ಈಗ ಮರ್ಯಾದೆ ಕಮ್ಮಿ. ಸೈಕಲ್ ಹತ್ತಿ ಹೋಗುತ್ತಿದ್ದ ಅಜ್ಜಂದಿರೂ ಈಗ ಸ್ಕೂಟರ್ ಓಡಿಸುತ್ತಿದ್ದಾರೆ. ಇಎಂಐ ಎಷ್ಟಾದರೂ ಇರಲಿ. ಟು ವೀಲರ್ ಆದರೂ ಇರಬೇಕು.

ಹೆಣ್ಣು ಹುಡುಕುವುದಕ್ಕೆ ಬಯೋಡೇಟಾ ಕೂಡ ಅಗತ್ಯವಂತೆ- ಗೆಳೆಯನೊಬ್ಬ ಹೇಳಿದ. ಮದುವೆಗೆ ಸದ್ದಿಲ್ಲದೆ ತಯಾರಾಗುತ್ತಿರುವ ಸೂಚನೆ ಅವನ ಮಾತಿನಿಂದ ಬಂತು. ರೆಸ್ಯೂಮ್, ಸಿವಿ‌ ಮಾಡುವುದು ಗೊತ್ತು ಮಾರಾಯ, ಬಯೋಡೇಟಾ ಗೊತ್ತಿಲ್ಲ. ಸ್ಯಾಂಪಲ್ ಕಳುಹಿಸು ಎಂದೆ. ಇನ್ನೂ ಬಂದಿಲ್ಲ.‌ ಅವನೋ ಇನ್ಸ್ಟಾಗ್ರಾಮ್ ನಲ್ಲಿ ಬ್ಯುಸಿ ಇರಬೇಕು!

ಆ್ಯಕ್ಚುವಲಿ, ಗಂಡು- ಹೆಣ್ಣುಗಳು ಇನ್ಸ್ಟ್ಯಾಂಟ್ ಆಗಿ ಹತ್ತಿರವಾಗುವುದಕ್ಕೆ ಇನ್ಸ್ಟಾ ಈಗ ಒಳ್ಳೆಯ ವೇದಿಕೆಯಂತೆ. ಇನ್ಸ್ಟಾಗ್ರಾಮ್ ಎಂಬ ಸಮುದ್ರದಿಂದ ವಾಟ್ಸಾಪ್ ಎಂಬ ನದಿಗೆ ಬಂದು ಬಳಿಕ ಸಂಸಾರವೆಂಬ ಕೊಳಕ್ಕೆ ಬರುವುದಂತೆ. ನಾವು ವಾಟ್ಸಾಪ್ ನಲ್ಲಿ ಗಾಳ ಹಾಕಿದರೆ ಏನು ಫಲ ಹೇಳಿ?

ಇನ್ಸ್ಟಾಗ್ರಾಂ ರೀಲ್ಸ್ ಮಾಡಲಾಗದಿದ್ದರೆ ಪರವಾಗಿಲ್ಲ. ನೋಡಬೇಕು, ಮೆಚ್ಚುಗೆಯಾಗಬಹುದಾದುದನ್ನು ಆ ಬದಿಯವರಿಗೆ ಕಳುಹಿಸಬೇಕು. ಆ ಕಡೆಯಿಂದ ಬಂದುದನ್ನು ನೋಡಿ ಪ್ರತಿಕ್ರಿಯೆ ನೀಡಬೇಕು, ಅದಕ್ಕೆ ಬೇಕಾದ ಇಮೋಜಿ ಮತ್ತಿತರ ಸಂಗತಿಗಳನ್ನು ಅರಿತುಕೊಳ್ಳಬೇಕು. ಈ ರೀತಿಯ ಕಲೆಗಳನ್ನು ತಿಳಿದಿರಬೇಕು. ಜೊತೆಗೆ ಅಡುಗೆಯೂ ಗೊತ್ತಿದ್ದರೆ ಇನ್ನೂ ಪ್ಲಸ್ ಅಂತೆ. ಇನ್ನು ಬೈಕ್ ನಲ್ಲಿ ಲಾಂಗ್ ಟ್ರಿಪ್ (ಕಾರು ಇದ್ದರೆ ಇನ್ನೂ ಅನುಕೂಲ), ಮದುವೆಗೆ ಓಕೆ ಆದರೆ ಸಿನೆಮಾ ಶೈಲಿಯಲ್ಲಿ ಪ್ರಿ ವೆಡ್ಡಿಂಗ್ ಶೂಟ್, ಪಾರ್ಟಿ, ಇತ್ಯಾದಿ ವಿಶೇಷಗಳಿಗೆ ಖರ್ಚು ಮಾಡಲು ತಯಾರಿರಬೇಕು. ಇನ್ನೂ ಏನೇನೋ ಇರಬಹುದು.

ಮದುವೆಗೆ ಹೆಣ್ಣು ನೋಡುವ ಪ್ರಕ್ರಿಯೆ ಕೂಡ ಸವಾಲಿನದ್ದೇ. ಒಂದೆರಡು ಪಾರ್ಟಿಗಳಿಗೆ ಹೆಣ್ಣು ನೋಡುವ ಪ್ರಕ್ರಿಯೆಯಲ್ಲಿ ನಾನು ಕೂಡ ಪರೋಕ್ಷವಾಗಿ ಪಾಲ್ಗೊಳ್ಳಬೇಕಾಯಿತು. ಹುಡುಗಿಯ ಫೋಟೋ ಹುಡುಗನ ಕಡೆಯವರಿಗೆ, ಹುಡುಗನ ಫೋಟೋ ಹುಡುಗಿಯ ಕಡೆಯವರಿಗೆ ಕಳುಹಿಸುವ, ಸ್ವೀಕರಿಸುವ ಕೆಲಸ; ಕಳುಹಿಸಿದ ಬಳಿಕ ಪ್ರತಿಕ್ರಿಯೆ ತಿಳಿದುಕೊಂಡು ಅದನ್ನು ದಾಟಿಸುವ ಕೆಲಸ. ಅದೇ ಕಿರಿಕಿರಿ ಎನ್ನಿಸಿತು. ಇನ್ನು ಸ್ವತಃ ನಮಗಾಗಿ ಹೆಣ್ಣು ಹುಡುಕುವುದು ಎಷ್ಟು ಕಷ್ಟ ಇರಬಹುದು ಎನ್ನಿಸಿ ಮದುವೆ ಯಾಕಾದರೂ ಇದೆಯೋ ಎನಿಸಿತು.

ಹೌದು, ಮದುವೆಯಾದವರೆಲ್ಲ ಸುಖವಾಗಿರುವರೇ? ಆಸ್ತಿ, ಅಂತಸ್ತು ನೋಡಿ ಮದುವೆಯಾದ ಹುಡುಗಿ ಮನಸ್ಸನ್ನು ಅರಿಯದಿದ್ದರೆ, ಮನೆಯನ್ನು ಸಂಭಾಳಿಸದಿದ್ದರೆ, ಮನೆಯನ್ನೇ ಒಡೆದು ಬಿಟ್ಟರೆ ಗತಿಯೇನು? ಮದುವೆಗೆ ಮನಸ್ಸು ಮುಖ್ಯವೇ? ಆಸ್ತಿ ಮುಖ್ಯವೇ? ಅಡುಗೆ ಮಾಡಿ ಹಾಕಲು ಮದುವೆಯಾಗುವುದಲ್ಲ. ಆದರೂ ಹುಡುಗಿಗೆ ತಕ್ಕ ಮಟ್ಟಿಗೆ ಅಡುಗೆ ಮಾಡಲೂ ಗೊತ್ತಿಲ್ಲದಿದ್ದರೆ ಬ್ಯಾಚುಲರ್ ಬದುಕಿಗೂ ವೈವಾಹಿಕ ಜೀವನಕ್ಕೂ ಏನು ವ್ಯತ್ಯಾಸ? ಅದೊಂದು ರೀತಿಯಲ್ಲಿ ಲಿವ್ ಇನ್ ರಿಲೇಶನ್ ಶಿಪ್ ನಂತಾಗದೇ? ಮದುವೆಯಾದ ಬಳಿಕ ಹುಡುಗಿ ಬೇರೆ ಹುಡುಗನನ್ನು ಇಷ್ಟಪಟ್ಟರೆ? ಅಥವಾ ಅವಳಿಗೆ ಮೊದಲೇ ಬೇರೊಬ್ಬ ಇಷ್ಟವಿದ್ದು, ಮನೆಯವರ ಒತ್ತಾಯಕ್ಕೆ ಇನ್ನೊಬ್ಬನನ್ನು ಮದುವೆಯಾದರೆ? – ಹೀಗೆಲ್ಲ ಚರ್ಚೆಗಳು ಅವಿವಾಹಿತರ ಕೂಟದಲ್ಲಿ ನಡೆಯುತ್ತಿರುತ್ತವೆ.

ಕೈಯಲ್ಲಿ ಕಾಸಿಲ್ಲದೆ ಮದುವೆಯಾಗಬಾರದು. ಕೂಡಿಟ್ಟದ್ದು ಏನೂ ಇಲ್ಲದೆ ಕಾಸು ಮಾಡಿಯೇ ಮದುವೆಯಾಗುತ್ತೇನೆಂದರೂ ಆಗದು. ಮದುವೆಗೆ ಆಡಂಬರ ಮಾಡಬಾರದು. ಆಪ್ತರನ್ನು ಕರೆಯದಿದ್ದರೂ ಆಗದು ಇತ್ಯಾದಿ ಸಲಹೆಗಳನ್ನು ವಿವಾಹಿತರು ನೀಡುತ್ತಾರೆ. ಆಧುನಿಕ ಕಾಲದಲ್ಲಿ ದುಬಾರಿ ಜಗತ್ತಿನಲ್ಲಿ ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬ ಗಾದೆಯು ಜವಾಬ್ದಾರಿಗಳನ್ನು ಹೊಂದಿದ ‘ನೈಂಟೀಸ್ ಕಿಡ್’ಗಳಿಗೆ ‘ಮನೆ ಕಟ್ಟಿ ನೋಡು, ಮದುವೆ ಆಗಿ ನೋಡು’ ಎಂಬಂತಾಗಿ ಮಾರ್ಪಾಡಾಗಿರುವಾಗ ಖಂಡಿತವಾಗಿಯೂ ಮದುವೆ ಎಂಬುದು ಭಾರೀ ಸವಾಲೇ ಸರಿ. ಮದುವೆಯೇನೋ ಆಗಬೇಕು. ಇರಲಿ, ಇಷ್ಟೆಲ್ಲ ಬರೆಯುವಾಗ ಇದೋ ಈಗಷ್ಟೇ ಕಿರಿಯ ಸ್ನೇಹಿತ ತನ್ನ ಮಗುವಿನ ಹುಟ್ಟುಹಬ್ಬಕ್ಕೆ ಕರೆದಿದ್ದಾನೆ. ಸ್ಕೂಲ್ ಫ್ರೆಂಡ್ ಮದುವೆ ಆಮಂತ್ರಣ ವಾಟ್ಸಾಪ್ ಮಾಡಿದ್ದಾನೆ!

ಬರಹ-ಕುದ್ಯಾಡಿ ಸಂದೇಶ್ ಸಾಲ್ಯಾನ್