ಊದುಬತ್ತಿ-ಮತಾಪು: ಉಪಯೋಗ ಮತ್ತು ಉಪದ್ರವಗಳೇನು ಗೊತ್ತಾ?ಒಮ್ಮೆ ಓದಿ ಉದಯ ಶೆಟ್ಟಿ ಬರೆದ ಬರಹ

ಭಾರತೀಯರಾದ ನಾವು ನಮ್ಮ ನಂಬಿಕೆಗಳ ಆಚರಣೆಗಾಗಿ ಕೆಲವೊಂದು ವಸ್ತುಗಳನ್ನು ಅವ್ಯಾಹತವಾಗಿ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದರು ಎಂಬ ಒಂದೇ ಕಾರಣಕ್ಕಾಗಿ ಆ ವಸ್ತುಗಳನ್ನು ಅವರಿಗಿಂತ ಹೆಚ್ಚಾಗಿ ಉಪಯೋಗಿಸುತ್ತೇವೆ. ಆ ವಸ್ತುಗಳನ್ನು ಬಳಸುವುದರಿಂದ ಆಗುವ ಉಪಯೋಗಕ್ಕಿಂತ ಉಪದ್ರವಗಳೇ ಅಧಿಕ. ಸನಾತನಿಗಳಾದ ನಮ್ಮ ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳಲ್ಲಿ ಉಪಯೋಗಿಸಲ್ಪಡುವ ಊದುಕಡ್ಡಿ (ಅಗರಬತ್ತಿ)ಗಳ ಉಪಯೋಗ ಮತ್ತು ಅವುಗಳಿಂದಾಗುವ ಉಪದ್ರವಗಳ ಬಗ್ಗೆ ತಾರ್ಕಿಕವಾಗಿ ನಮ್ಮನ್ನು ನಾವು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕಾದ ಕಾಲವಿದು.

ಊದುಬತ್ತಿ : ಊದುಬತ್ತಿಯು ತನ್ನನ್ನು ತಾನು ಉರಿಸಿಕೊಂಡು ಸುತ್ತಲ ಪರಿಸರಕ್ಕೆ ಸುಗಂಧವನ್ನು ಪಸರಿಸುತ್ತ ತನ್ನ ಇರವನ್ನು ಸಾರುತ್ತ ನಮ್ಮ ಮನ ಮನೆಗಳಲ್ಲಿ ನಿತ್ಯ ಸ್ಥಿರವಾದ ನೆಲೆ ಕಂಡಿರುವ ವಸ್ತು. ಊದುಬತ್ತಿಯು ಗೈರುಹಾಜರಾಗಿರುವ ಪೂಜೆ ಪುನಸ್ಕಾರಗಳನ್ನು ನಾವು ನಮ್ಮ ಮನೋಪಟಲದಲ್ಲಿ ಊಹಿಸಿಕೊಳ್ಳಲು ಅಸಾಧ್ಯ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ನೈಸರ್ಗಿಕವಾದ ಗಿಡ ಮರಗಳ ಮೇಣಗಳನ್ನು ಸಂಸ್ಕರಿಸಿ ಸುಗಂಧಭರಿತ ಧೂಪಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಉರಿಸಿದಾಗ ಸುಗಂಧ ನಾಲ್ದೆಸೆಗೂ ಪಸರಿಸಿ ಆಹ್ಲಾದಕರ ವಾತಾವರಣ ಸೃಜಿಸಲ್ಪಡುತ್ತಿರಬೇಕು. ಯಾವಾಗ ಈ ಸಂಸ್ಕರಣ ಕಾರ್ಯ ಉದ್ಯಮವಾಗಿ ಮುಂಬಡ್ತಿ ಪಡೆಯಿತೋ ಆಗ ಊದುಬತ್ತಿಯು ರೂಪಾಂತರದೊಂದಿಗೆ ಹತ್ತು ಹಲವು ಅವಾಂತರಗಳಿಗೆ ಜನ್ಮ ನೀಡುವ ಜನನಿಯಾಯಿತು.

ಉಪಕಾರಗಳು: ಕರ್ನಾಟಕ ಸಹಿತ ಹಲವು ಭಾರತೀಯ ರಾಜ್ಯಗಳು ತಮ್ಮ ಗುಡಿಕೈಗಾರಿಕಾ ಘಟಕಗಳಲ್ಲಿ ಬಾರಿ ಪ್ರಮಾಣದಲ್ಲಿ ಊದುಬತ್ತಿಯನ್ನು ಉತ್ಪಾದಿಸುತ್ತವೆ. ಹೀಗೆ ಉತ್ಪಾದಿಸಲ್ಪಟ್ಟ ಊದುಬತ್ತಿಗಳು ರಾಜ್ಯ, ರಾಷ್ಟ್ರ, ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತದೆ. ಊದುಬತ್ತಿಯ ರಫ್ತಿನಿಂದಾಗಿ ಸಾವಿರಾರು ಕೋಟಿ ವಿದೇಶಿ ವಿನಿಮಯ ದೇಶಕ್ಕೆ ಲಭಿಸುತ್ತದೆ. ಲಕ್ಷಾಂತರ ಜನರ ಉದರ ಪೋಷಣೆಯ ಸಾಧನವಾಗಿದೆ ಈ ಸಪೂರ ನರಪೇತಲ ಊದುಬತ್ತಿ ಕಡ್ಡಿಗಳು.

ಸುಮದ ಹಾರ ಸುರಲೋಕ ಸೇರುವಾಗ ನಾರನ್ನು ಹೇಗೆ ಮರೆಯಲಿಲ್ಲವೋ ಹಾಗೆಯೇ ಊದುಬತ್ತಿಯು ತನಗೆ ಆಧಾರ ಸ್ಥಂಭವಾಗಿರುವ ಬಿದಿರನ್ನು ಕಡೆಗಣಿಸಿಲ್ಲ. ಊದುಬತ್ತಿಯಿಂದಾಗಿ ನಮ್ಮ ದೇಶದ ಬಿದಿರು ಗ್ರಾಂ, ಮಿಲೀಗ್ರಾಂ ತೂಕದ ಪರಿಮಾಣದಲ್ಲಿ ದೇಶ ವಿದೇಶಗಳಲ್ಲಿ ಸಂಚರಿಸುತ್ತಿದೆ. ಊದುಬತ್ತಿಗೆ ಆಧಾರವಾಗುವ ಬಿದಿರು ಗುಡ್ಡಕಾಡು, ಗಿರಿಜನರುಗಳ ಬದುಕಿಗೆ ಆಧಾರವಾಗಿರುವುದಂತು ಸತ್ಯ. ಊದುಬತ್ತಿ ಉತ್ಪಾದಕರಿಗೆ, ಅಲ್ಲಿ ಶ್ರಮಿಸುವ ಶ್ರಮಿಕರಿಗೆ,
ರಖಂ ವ್ಯಾಪಾರಸ್ಥರಿಗೆ, ಸಣ್ಣ ವ್ಯಾಪಾರಿಗಳಿಗೆ ಊದುಬತ್ತಿ ವರವಾಗಿ ಪರಿಣಮಿಸಿದೆ.

ಉಪದ್ರವಗಳು : ಮೇಲೆ ಹೇಳಿದ ಘನತರವಾದ ಉಪಕಾರದ ಉದ್ದಿಮೆಯಾಗಿರುವ ಊದುಬತ್ತಿಯ ಉಪದ್ರವಗಳು ಉಲ್ಲೇಖಾರ್ಹವಾಗಿವೆ. ರಾಸಾಯನಿಕ ಬಳಸಿ ಉತ್ಪಾದಿಸಲಾಗುವ ಊದುಬತ್ತಿಯಿಂದಾಗಿ ಅನೇಕ ತರದ ದುಷ್ಪರಿಣಾಮಗಳಾಗುತ್ತವೆ. ರಾಸಾಯನಿಕದಿಂದಾಗಿ ಉತ್ಪಾದನಾ ಸ್ತರದಲ್ಲೇ ಕಾರ್ಮಿಕರು ನಾನಾ ತರದ ವ್ಯಾಧಿಗ್ರಸ್ತರಾಗುತ್ತಾರೆ. ಊದುಬತ್ತಿಯ ಮೂಲ ಪದಾರ್ಥಗಳಾದ ಬೆರಣಿ ಮತ್ತು ಬಿದಿರುಗಳ ಹೊಗೆಯು ಆರೋಗ್ಯದ ಮೇಲೆ ಹಲವು ತೆರನಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಸುಗಂಧಕ್ಕೆ ಮುಖ್ಯವಾಗಿ ಬಳಸುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಸ್ (Poly Aromatic Hydrocarbons) ಕ್ಯಾನ್ಸರ್ ಕಾರಕವಾಗಿರುತ್ತವೆ ಎಂದು ಅಧ್ಯಯನಗಳಿಂದ ದೃಢಿಕರೀಸಲ್ಪಟ್ಟಿವೆ. ಡಾ. ಎನ್. ಕೆ. ಕಾಳಪ್ಪನವರ್ ಅವರು ಅಭಿಪ್ರಾಯ ಪಡುವಂತೆ “ಹೊರಾಂಗಣದ ವಾಯು ಮಾಲಿನ್ಯಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಒಳಾಂಗಣದ ಮಾಲಿನ್ಯವು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಗರಬತ್ತಿ, ಸೊಳ್ಳೆ ಬತ್ತಿಗಳ ಉಪಯೋಗದಿಂದ ತಲೆನೋವು, ನಿದ್ರಾಹೀನತೆ, ತಲೆಸುತ್ತುವುದು, ಕಣ್ಣುರಿ, ಕೆಮ್ಮು, ಅಲರ್ಜಿ, ಅಸ್ತಮ, ಕಫ ಕಟ್ಟುವುದು, ಉಸಿರಾಟದ ತೊಂದರೆ, ಅರ್ಬುದ ಮುಂತಾದ ರೋಗಗಳು ಬರುವ ಸಾಧ್ಯತೆ ಇದೆ.”

ಉಪಸಂಹಾರ : ಹಿಂದುಗಳಾದ ನಾವು ಮೃತ ದೇಹವನ್ನು ಮನೆಯಿಂದ ರುದ್ರಭೂಮಿಗೆ ಒಯ್ಯಲು ಚಟ್ಟವನ್ನು ಬಿದಿರಿನ ಗಳುಗಳಿಂದ ಕಟ್ಟುತ್ತೇವೆ. ರುದ್ರಭೂಮಿಯಲ್ಲಿ ಹೆಣವನ್ನು ಚಟ್ಟದಿಂದ ಇಳಿಸಿ ಕಾಷ್ಠದ ಮೇಲೆ ಇಟ್ಟು ಬೆಂಕಿಕೊಡುತ್ತೇವೆ. ಆದರೆ ಚಟ್ಟ ಕಟ್ಟಿದ್ದ ಆ ಬಿದಿರಿನ ಗಳುಗಳನ್ನು ಸುಡುವುದಿಲ್ಲ. ನಮ್ಮ ಹಿರಿಯರು ಬಿದಿರನ್ನು ಉರಿಸಿದಲ್ಲಿ ವಾತಾವರಣ ಮೇಲಾಗುವ ಪರಿಣಾಮಗಳನ್ನು ಖಚಿತವಾಗಿ ಅರಿತಿದ್ದರು ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಮತಾಪು (ಪಟಾಕಿ) : ಬೆಂಕಿ ಕೊಟ್ಟಾಗ ಪಟ ಪಟ ಸದ್ದು ಮಾಡುವ ಮದ್ದು. ಹಬ್ಬ ಹರಿದಿನಗಳಲ್ಲಿ ಬಳಸಲ್ಪಡುವ ಪಟಾಕಿಗೆ ಬೆಂಕಿಕೊಟ್ಟು ಅದು ಸಿಡಿಲ ಘರ್ಜನೆಯೊಂದಿಗೆ ಶಬ್ದ ವರ್ಣಗಳ ಸಮಿಶ್ರವಾಗಿ ಸಿಡಿಯುವಾಗ ಆನಂದಿಸದವರಾರು. ? ಜಾತ್ರೆಗಳಲ್ಲಿ, ದೀಪಾವಳಿ ಹಬ್ಬದಲ್ಲಿ ಮತಾಪು ಇಲ್ಲದಿದ್ದರೆ ಮಜಾನೇ ಗೋತಾ. ಕ್ರಿಕೆಟ್ ತಂಡ ಗೆದ್ದಾಗ, ರಾಜಕೀಯ ಪುಢಾರಿಗಳು ಗೆದ್ದಾಗ, ಸರಕಾರ ಎದ್ದಾಗ, ಬಿದ್ದಾಗ ವಿಜಯೋತ್ಸವದ ಪ್ರತೀಕವಾಗಿ ಸುಡಲ್ಪಡುತ್ತವೆ ಈ ಪಟಾಕಿಗಳು. ನಮ್ಮ ಮನಪಟಲದಲ್ಲಿ ಪಟಾಕಿ ಪಟ ಪಟನೆ ಸಿಡಿಯುತ್ತ ಮುದಗೊಳಿಸುತ್ತವೆ.


ಉಪಕಾರ : ಊದುಬತ್ತಿಯಂತೆ ವಿದೇಶಗಳಿಗೆ ರಫ್ತಾಗಿ ವಿದೇಶ ವಿನಿಮಯ ಗಳಿಸದೇ ಇದ್ದರೂ ಪಟಾಕಿ ತನ್ನ ಕಾರ್ಯಕ್ಷೇತ್ರವನ್ನು ದೇಶದೆಲ್ಲೆಡೆ ಪಸರಿಸಿದೆ. ತಮಿಳುನಾಡಿನ ಶಿವಕಾಶಿಯ ವಿರುದನಗರ ಭಾರತದಲ್ಲಿ ತಯಾರಾಗುವ ಪಟಾಕಿಗಳ ಎಪ್ಪತ್ತರಷ್ಟನ್ನು ತಯಾರಿಸುತ್ತದೆ. ಆದ್ದರಿಂದ ಶಿವಕಾಶಿಯು ಭಾರತದ ಪಟಾಕಿಗಳ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಪಟಾಕಿಗೆ ಉಪಯೋಗಿಸುವ ರಾಸಾಯನಿಕ ತಯಾರಿಸುವವರಿಗೆ, ಪೂರೈಕೆದಾರರಿಗೆ, ಕಾಗದ, ನೂಲು ಉತ್ಪಾದಕರಿಗೆ, ಮುದ್ರಣ ಸಂಸ್ಥೆಗಳ ಜೀವನ ನಿರ್ವಹಣೆಯ ವಸ್ತುವಾಗಿದೆ ಪಟಾಕಿ. ಶಿವಕಾಶಿಯ ಜನರ ಮುಖ್ಯ ಕಸುಬಾಗಿದೆ ಈ ಪಟಾಕಿ.

ಉಪದ್ರವಗಳು: “ಪಟಾಕಿಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಿಳಿಯಲು ನಿಮಗೆ ಐಐಟಿಯ ಅಧ್ಯಯನದ ಅಗತ್ಯವಿದೆಯೇ. ದೀಪಾವಳಿ ಸಂದರ್ಭದಲ್ಲಿ ಏನಾಗುತ್ತದೆ ಎಂದು ದೆಹಲಿಯಲ್ಲಿ ವಾಸವಾಗಿರುವ ಯಾರಿಗಾದರೂ ಕೇಳಿ ನೋಡಿ” ಎಂದು ನ್ಯಾಯಮೂರ್ತಿಗಳಾದ ಎ. ಎಂ. ಖಾನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಕಟುವಾಗಿ ಟೀಕಿಸಿರುವುದನ್ನು ನಾವಿಲ್ಲಿ ಗಮನಿಸಬೇಕು. ಆಗ ಗೊತ್ತಾಗುತ್ತದೆ ಪಟಾಕಿಯಿಂದಾಗುವ ಅನಾಹುತ ಏನು, ಹೇಗೆ ಎಂದು.

ಪ್ರತಿವರ್ಷ ದೀಪಾವಳಿಯ ಸಮಯದಲ್ಲಿ ನಾವು ಕೇಳುತ್ತೇವೆ, ನೋಡುತ್ತೇವೆ, ಮರೆತು ಬಿಡುತ್ತೇವೆ. ಪಟಾಕಿ ಕಾರ್ಖಾನೆಯ ಹತ್ತಾರು ಕಾರ್ಮಿಕರು, ಎಕರೆಗಟ್ಟಲೆ ಜೋಳ, ಬತ್ತದ ಬೆಳೆ, ಹುಲ್ಲಿನ ದಣಬೆಗಳು ಸುಟ್ಟು ಕರಕಲಾದವು. ಕಣ್ಣು, ಕಿವಿ ಕಳಕೊಂಡರು. ಕೈಸುಟ್ಟುಗೊಂಡರು. ಮನೆ, ಹಟ್ಟಿಗಳು ಸುಟ್ಟುಹೋದವು. ಇಷ್ಟೇ ಅಲ್ಲದೆ ವಾತಾವರಣದ ಮೇಲೆ ಪ್ರದೂಷಣ, ಪಶು ಪಕ್ಷಿಗಳು, ಸಾಕು ಪ್ರಾಣಿಗಳು ಹೆದರಿ ಥರಥರನೆ ಕಂಪಿಸುತ್ತವೆ.

ಹಸುಗೂಸುಗಳು, ವೃದ್ಧರು, ಗರ್ಭಿಣಿ ಸ್ತ್ರೀಯರು, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇರುವವರು ಸುಡ್ಡು ಮದ್ದಿನಿಂದ ಬಹಳಷ್ಟು ಘಾಸಿಗೊಳ್ಳುತ್ತಾರೆ. ಭಾರತದಲ್ಲಿ ತಯಾರಾಗುವ ಪಟಾಕಿ ಸಾಲದೆ ಚೀನಾದಿಂದ ಆಮದು ಮಾಡಿಕೊಳ್ಳಾಗುತ್ತದೆ. ಇದರಿಂದಾಗಿ ಭಾರತೀಯ ವಿದೇಶಿ ವಿನಿಮಯದ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.
ಹೆಚ್ಚು ಪಟಾಕಿಗಳನ್ನು ಸುಡುವುದರಿಂದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಜೀವ ಸಂಕುಲಕ್ಕೆ ಉಸಿರಾಡಲು ಶುದ್ಧ ಗಾಳಿಯ ಕೊರತೆ ಉಂಟಾಗುತ್ತದೆ. ಪಟಾಕಿಯಲ್ಲಿರುವ ಅಲ್ಯೂಮೀನಿಯಂ ಮತ್ತು ಬೇರಿಯಂನಿಂದ ಚರ್ಮದ ಹಾಗೂ ಉಸಿರಾಟದ ರೋಗಗಳು ಬರುತ್ತವೆ ಎಂದು ದೃಢಪಟ್ಟಿದೆ.

ಉಪಸಂಹಾರ: “ಪಟಾಕಿಯನ್ನು ಸುಡುವುದು ಒಂದೇ ನಮ್ಮ ದುಡಿತದ ಹಣಕ್ಕೆ ಬೆಂಕಿಕೊಡುವುದು ಒಂದೇ.” ಇದು ಬಲ್ಲವರಾಡುವ ಮಾತು. ನಮ್ಮ ದೇವರುಗಳ, ರಾಷ್ಟ್ರ ಪುರುಷರ ಭಾವಚಿತ್ರವಿರುವ ಪಟಾಕಿಗಳನ್ನು ಹೇರಳವಾಗಿ ಮಾರುಕಟ್ಟೆಗೆ ಹರಿಯ ಬಿಡಲಾಗುತ್ತದೆ. ಇದು ನಮ್ಮ ಧರ್ಮದ ತೇಜೋವಧೆಗೆ ನಾವೇ ಕುಮ್ಮಕ್ಕು ಕೊಟ್ಟಂತೆ ಅಲ್ಲವೆ.? ಈಗೀರುವ ಪಟಾಕಿಗಳಿಗೆ ಪರ್ಯಾಯವಾಗಿ ಏನಾದರೂ ಬಂದರೆ ಅವನ್ನು ಸ್ವಾಗತಿಸಬಹುದೋ ಏನೋ?
ಕಾಲಾಯ ತಸ್ಮೈ ನಮ:

ಉದಯ ಶೆಟ್ಟಿ, ಪಂಜಿಮಾರು