ಅಗಲಿದ ಐ.ಪಿ.ಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಶೃದ್ಧಾಂಜಲಿ ಸಮರ್ಪಣೆ.

ಉಡುಪಿ: ಅಗಲಿದ ಪೊಲೀಸ್ ಇಲಾಖೆಯ ದಿಟ್ಟ ಪ್ರಾಮಾಣಿಕ ಐ.ಪಿ.ಎಸ್ ಅಧಿಕಾರಿ ಮಧುಕರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ಮಾರುತಿ ವಿಥಿಕಾದಲ್ಲಿರುವ ಸಮಿತಿಯ ಕಛೇರಿ ವಠಾರದಲ್ಲಿ ಶನಿವಾರ ಸಂಜೆ ನಡೆಯಿತು.
ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ನುಡಿ ನಮನ ಸಲ್ಲಿಸಿ ಮಾತನಾಡಿದ ಬಡಗುಬೆಟ್ಟು ಸಹಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಜಯಕರ್ ಶೆಟ್ಟಿ ಇಂದ್ರಾಳಿ, ಒರ್ವ ಪ್ರಾಮಾಣಿಕ ದಕ್ಷ ಭ್ರಷ್ಟಚಾರಿಗಳಿಗೆ ಕಂಟಕರಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಅಗಲಿಕೆ ರಾಜ್ಯ ತುಂಬಲಾರದ ನಷ್ಟ, ಅವರ ಕುಟುಂಬ ವರ್ಗಕ್ಕೆ ದೇವರು ಅಗಲಿಕೆಯ ನೊವು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ನಿವೃತ್ತ ಎ.ಎಸ್.ಐ ಕೇಳು ನಾರಾಯಣ ಅವರು ನುಡಿನಮನ ಸಲ್ಲಿಸಿದರು. ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಪುಷ್ಪ ನಮನ ಸಲ್ಲಿಸಲು ರಾತ್ರಿವರೆಗೂ ಸಮಿತಿ ಅವರು ಅವಕಾಶ ಮಾಡಿಕೊಟ್ಟರು.
ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಗೌರವ ಅಧ್ಯಕ್ಷ ಎಂ ಶ್ರೀನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಮಹಮದ್, ಸುಧಾಕರ ಶೆಟ್ಟಿ, ಸುನೀಲ್ ಶೇಟ್, ಸುಧಾಕರ ಒಳಕಾಡು, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.