ರಾಮಮಂದಿರದ ಬಳಿಕ ಇದೀಗ ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ

ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಬೆನ್ನಲ್ಲೇ ಇದೀಗ ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗದ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ.

ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ (BKTC) ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೇಣಿಗೆ ದುರುಪಯೋಗದ ಆರೋಪಗಳನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಕೆಲ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದೇ ವೇಳೆ, ಆರೋಪ ಎದುರಿಸುತ್ತಿರುವ ವ್ಯಕ್ತಿ ತಮ್ಮ ವೈಯಕ್ತಿಕ ಕಾರ್ಯದರ್ಶಿ ಎಂಬ ಹೇಳಿಕೆಯನ್ನು ಹೇಮಂತ್ ದ್ವಿವೇದಿ ತಳ್ಳಿಹಾಕಿದ್ದು, ಆತ ದೇವಸ್ಥಾನ ಸಮಿತಿಯ ಸಾಮಾನ್ಯ ನೌಕರನಾಗಿದ್ದು, ತಮ್ಮ ವೈಯಕ್ತಿಕ ಕಾರ್ಯದರ್ಶಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಕೆಟಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಮಾತನಾಡಿ, ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ. ಸಿಸಿಟಿವಿ ದೃಶ್ಯಾವಳಿ, ಲಭ್ಯವಿರುವ ದಾಖಲೆಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ತನಿಖಾ ಸಮಿತಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಯಾವುದೇ ಅಕ್ರಮ ಬೆಳಕಿಗೆ ಬಂದರೆ, ತಪ್ಪಿತಸ್ಥರ ವಿರುದ್ಧ ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939′ ಹಾಗೂ ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ತನಿಖೆ ಪೂರ್ಣಗೊಳ್ಳುವವರೆಗೆ ವದಂತಿಗಳಿಗೆ ಕಿವಿಗೊಡದೆ, ದೃಢೀಕರಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ದೇವಸ್ಥಾನ ಸಮಿತಿ ಸಾರ್ವಜನಿಕರಿಗೆ ಮನವಿ ಮಾಡಿದೆ.