ಪೆಟ್ರೊಲ್, ಡೀಸೆಲ್ ಬಳಿಕ ಇದೀಗ CNG ದರ ಕೂಡ ಏರಿಕೆ, ಆಟೋ, ಕ್ಯಾಬ್, ದರದಲ್ಲೂ ಹೆಚ್ಚಳ ಸಾಧ್ಯತೆ!

ದೇಶದಲ್ಲಿ ಇಂಧನ ದರ ಏರಿಕೆಯ ನಡುವೆಯೇ ಇದೀಗ CNG (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ದರವೂ ಹೆಚ್ಚಳ ಕಂಡಿದ್ದು, ವಾಹನ ಸವಾರರಿಗೆ ಮತ್ತೊಂದು ಹೊರೆ ಎದುರಾಗಿದೆ. ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಪರಿಣಾಮವಾಗಿ CNG ದರವನ್ನು ಪ್ರತಿ ಕಿಲೋಗ್ರಾಂಗೆ ಸುಮಾರು ₹2ರವರೆಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದ್ದರೆ, ಇದೀಗ CNG ದರ ಏರಿಕೆಯೂ ಸಾರಿಗೆ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಟ್ಯಾಕ್ಸಿ, ಆಟೋ, ಬಸ್ ಹಾಗೂ ಇತರೆ ವಾಣಿಜ್ಯ ವಾಹನ ಚಾಲಕರು ಹೆಚ್ಚಿದ ಇಂಧನ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕುವ ಆತಂಕ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಲ್ಲಿ ದೈನಂದಿನ ಪ್ರಯಾಣ ವೆಚ್ಚವೂ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ, ವಿಶೇಷವಾಗಿ ಹೋರ್ಮುಜ್ ಜಲಸಂಧಿ ಮಾರ್ಗದ ಅಡಚಣೆ, ಇಂಧನ ಸರಬರಾಜಿನ ಮೇಲೂ ಪರಿಣಾಮ ಬೀರಿದೆ. ವಿಶ್ವದ ಬಹುಪಾಲು ಕಚ್ಚಾ ತೈಲ ಸಾಗಾಟ ಇದೇ ಮಾರ್ಗದ ಮೂಲಕ ನಡೆಯುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಒತ್ತಡ ಹೆಚ್ಚಾಗಿದೆ. ಇದರ ನೇರ ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳ ಇಂಧನ ದರಗಳ ಮೇಲೂ ಕಾಣಿಸುತ್ತಿದೆ.

CNG ದರ ಏರಿಕೆಯಿಂದ ಸಾರ್ವಜನಿಕ ಸಾರಿಗೆ ದರಗಳೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಾರಿಗೆ ವಲಯದ ಪ್ರತಿನಿಧಿಗಳು ತಿಳಿಸಿದ್ದಾರೆ. ಹಲವು ನಗರಗಳಲ್ಲಿ ಈಗಾಗಲೇ ಆಟೋ ಹಾಗೂ ಕ್ಯಾಬ್ ಚಾಲಕರು ಭಾಡಿಗೆ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ. ಇಂಧನ ತಜ್ಞರ ಪ್ರಕಾರ ಜಾಗತಿಕ ರಾಜಕೀಯ ಪರಿಸ್ಥಿತಿ ಸ್ಥಿರವಾಗುವವರೆಗೆ ಇಂಧನ ದರಗಳಲ್ಲಿ ಇನ್ನಷ್ಟು ಏರಿಳಿತ ಕಂಡುಬರುವ ಸಾಧ್ಯತೆ ಇದೆ.