ಮಾಸ್ಕೋ :ರಷ್ಯಾದ ವೊಸ್ಟೊಚ್ನಿ ಉಡಾವಣಾ ಕೇಂದ್ರದಿಂದ ಲೂನಾ -25 ಬಾಹ್ಯಾಕಾಶ ನೌಕೆಯು ಮಾಸ್ಕೋ ಸಮಯ ಶುಕ್ರವಾರ ಮುಂಜಾನೆ 2:10 ಕ್ಕೆ (ಐಎಸ್ಟಿ ಕಾಲಮಾನ ಬೆಳಗ್ಗೆ 4:40) ಸೋಯುಜ್ -2.1 ಬಿ ರಾಕೆಟ್ ಮೂಲಕ ನಭಕ್ಕೆ ಹಾರಿದೆ. 47 ವರ್ಷಗಳ ಬಳಿಕ ರಷ್ಯಾ ತನ್ನ ಲೂನಾ-25 ಲ್ಯಾಂಡರ್ ಮಿಷನ್ ಮೂಲಕ ಮತ್ತೆ ಚಂದ್ರನತ್ತ ಮುಖ ಮಾಡಿದೆ.
ದಶಕಗಳ ಬಳಿಕ ರಷ್ಯಾ ಮತ್ತೊಮ್ಮೆ ಚಂದ್ರನ ಮೇಲೆ ನೌಕೆ ಇಳಿಸಲು ಮುಂದಾಗಿದೆ. ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆಯು ಶುಕ್ರವಾರ ಸೋಯುಜ್ ರಾಕೆಟ್ ಮೂಲಕ ಚಂದ್ರನತ್ತ ಹಾರಿದೆ.
ಈ ಹಿಂದೆ ಇದ್ದ ಸೋವಿಯತ್ ಒಕ್ಕೂಟದ ಅವಧಿಯಲ್ಲಿ ರಷ್ಯಾದ ಕೊನೆಯ ಚಂದ್ರಯಾನ ಲೂನಾ -24 ಅನ್ನು 1976 ರಲ್ಲಿ ಉಡಾವಣೆ ಮಾಡಲಾಗಿತ್ತು. ಇದು ಸುಮಾರು 170 ಗ್ರಾಂ ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ಭೂಮಿಗೆ ತಲುಪಿಸಿತ್ತು.
ಲೂನಾ -25 ಸುರಕ್ಷಿತವಾಗಿ ಇಳಿದ ನಂತರ ಚಂದ್ರನ ಮೇಲ್ಮೈಯಲ್ಲಿ ಕನಿಷ್ಠ ಒಂದು ಭೂಮಿಯ ವರ್ಷದಷ್ಟು ಕಾಲ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸುವುದು ಇದರ ಪ್ರಮುಖ ಗುರಿಯಾಗಿದೆ. ಈ ಮಿಷನ್ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.
“ಈಗ ಎಲ್ಲರೂ ಚಂದ್ರನ ಧ್ರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ; ಈ ಪ್ರದೇಶವು ವೈಜ್ಞಾನಿಕ ಸಮುದಾಯದ ಪ್ರತಿಯೊಬ್ಬರಿಗೂ ಕುತೂಹಲಕಾರಿಯಾಗಿದೆ” ಎಂದು ಲಿಟ್ವಾಕ್ ಹೇಳಿದರು. “ಲೂನಾ -25 ಲ್ಯಾಂಡಿಂಗ್ ಪ್ರದೇಶದ ಮಣ್ಣಿನಲ್ಲಿ ಮಂಜುಗಡ್ಡೆಯ ಚಿಹ್ನೆಗಳಿವೆ; ಕಕ್ಷೆಯ ದತ್ತಾಂಶದಿಂದ ನೋಡಬಹುದು. ನಾವು ಈ ಮೊದಲು ಇಳಿದಿದ್ದ ಸಮಭಾಜಕ ವೃತ್ತದ ಪ್ರದೇಶಗಳಲ್ಲಿ ವಾತಾವರಣ ಹೀಗಿರಲಿಲ್ಲ” ಎಂದು ಅವರು ತಿಳಿಸಿದರು.”ಸರಳವಾಗಿ ಹೇಳುವುದಾದರೆ ಈವರೆಗೆ ಯಾರೂ ಇಳಿಯದ ಪ್ರದೇಶದಲ್ಲಿ ಇಳಿಯುವುದು ಲೂನಾ -25 ನ ಅತ್ಯಂತ ಪ್ರಮುಖ ಕಾರ್ಯವಾಗಿದೆ” ಎಂದು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಐಕೆಐ ಸಂಕ್ಷಿಪ್ತ ರೂಪದಿಂದ ಕರೆಯಲಾಗುತ್ತದೆ) ಮಿಷನ್ನ ಮುಖ್ಯ ವಿಜ್ಞಾನಿ ಮ್ಯಾಕ್ಸಿಮ್ ಲಿಟ್ವಾಕ್ ಐಕೆಐ ವೆಬ್ಸೈಟ್ನಲ್ಲಿ ಬರೆದಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಜುಲೈ 14 ರಂದು ಉಡಾವಣೆಗೊಂಡು ಆಗಸ್ಟ್ 6 ರಂದು ಚಂದ್ರನ ಕಕ್ಷೆಗೆ ತಲುಪಿದ ಭಾರತದ ಚಂದ್ರಯಾನ 3 ಶೋಧಕದಂತೆಯೇ ಲೂನಾ -25 ಅದೇ ಸಮಯದಲ್ಲಿ ಮತ್ತು ಅದೇ ಸಾಮಾನ್ಯ ಪ್ರದೇಶದಲ್ಲಿ ಇಳಿಯಲಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಆರ್ಟೆಮಿಸ್ ಕಾರ್ಯಕ್ರಮದ ಮೂಲಕ 2020 ರ ಅಂತ್ಯದ ವೇಳೆಗೆ ಚಂದ್ರನ ದಕ್ಷಿಣ ಧ್ರುವದ ಬಳಿ ಒಂದು ಅಥವಾ ನೆಲೆಗಳನ್ನು ಸ್ಥಾಪಿಸಲು ಯೋಜಿಸಿದೆ.ಪ್ರಸ್ತುತ ರಷ್ಯಾ ಹಾರಿಸಿದ ಲೂನಾ -25 ನೌಕೆ ಆಗಸ್ಟ್ 16 ರಂದು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಚಂದ್ರನ ಬೋಗುಸ್ಲಾವ್ಸ್ಕಿ (Boguslawsky crater) ಕುಳಿಯ ಪ್ರದೇಶವನ್ನು ಸ್ಪರ್ಶಿಸುವ ಮೊದಲು ಲೂನಾ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಮೀ ಎತ್ತರದಲ್ಲಿ ಮೂರರಿಂದ ಏಳು ದಿನಗಳವರೆಗೆ ಸುತ್ತಲಿದೆ. ಮ್ಯಾಂಜಿನಸ್ ಮತ್ತು ಪೆಂಟ್ಲ್ಯಾಂಡ್-ಎ ಕುಳಿಗಳನ್ನು ಪರ್ಯಾಯ ಲ್ಯಾಂಡಿಂಗ್ ತಾಣಗಳಾಗಿ ಗುರುತಿಸಲಾಗಿದೆ.