ಕೆಜಿಎಫ್​ 2 ದಾಖಲೆ ಹಿಂದಿಕ್ಕಿ ‘ಆದಿಪುರುಷ್​’ ಮುಂಗಡ ಬುಕ್ಕಿಂಗ್ :ವಿದೇಶಗಳಲ್ಲಿ ಭರ್ಜರಿ ರೆಸ್ಪಾನ್ಸ್​!

‘ಆದಿಪುರುಷ್​’.. ಓಂ ರಾವುತ್​ ನಿರ್ದೇಶನದ ‘ಆದಿಪುರುಷ್’​ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಬಿಡುಗಡೆಗೂ ಮುನ್ನವೇ ‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮುಂಗಡ ಟಿಕೆಟ್​ ಬುಕ್ಕಿಂಗ್‌ನಲ್ಲಿ ಕೆಜಿಎಫ್-2 ದಾಖಲೆಯನ್ನು ‘ಆದಿಪುರುಷ್​’ ಹಿಂದಿಕ್ಕಿದೆ.
ಭೂಷಣ್​ ಕುಮಾರ್​ ನಿರ್ಮಾಣದ ಈ ಸಿನಿಮಾದಲ್ಲಿ ಪ್ರಭಾಸ್​, ಕೃತಿ ಸನೋನ್​, ಸೈಫ್​ ಅಲಿ ಖಾನ್​ ನಟಿಸಿದ್ದಾರೆ. ಇದೇ 16 ರಂದು ಚಿತ್ರ ತೆರೆ ಕಾಣಲಿದೆ.

ಅದಕ್ಕೂ ಮುನ್ನವೇ ಆದಿಪುರುಷ್​ ದೇಶ, ವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಚಿತ್ರತಂಡವೂ ಅಷ್ಟೇ ಅದ್ಧೂರಿಯಾಗಿ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದೆ. ಇದೀಗ ಆದಿಪುರುಷ್​ ಟೀಮ್​ ಭಾರತ ಸೇರಿದಂತೆ ವಿಶ್ವದಾದ್ಯಂತ ಮುಂಗಡ ಟಿಕೆಟ್​ ಬುಕ್ಕಿಂಗ್ ಆರಂಭಿಸಿದೆ. ಯುನೈಟೆಡ್ ಸ್ಟೇಟ್ಸ್‌ (ಅಮೆರಿಕದಲ್ಲಿ) 187 ಸ್ಥಳಗಳಲ್ಲಿ ಒಟ್ಟು 10,727 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಒಟ್ಟು ಕಲೆಕ್ಷನ್​ ಸುಮಾರು 2 ಕೋಟಿಗಳಿಗೆ ತಲುಪಿದೆ. ಇದಲ್ಲದೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲೂ ‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿ ಪ್ರಿ-ರಿಲೀಸ್ ಕಲೆಕ್ಷನ್ ಸಿಕ್ಕಿದೆಯಂತೆ.

ಈ ದೇಶಗಳಲ್ಲಿ ‘ಕೆಜಿಎಫ್-2’ ದಾಖಲೆಗಳನ್ನು ‘ಆದಿಪುರುಷ್​’ ಮುರಿದಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ ಜನಪ್ರಿಯ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ‘ಬುಕ್ ಮೈ ಶೋ’ಗೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಟಿಕೆಟ್ ಬುಕ್​ ಮಾಡಿದ್ದಾರೆ. ಹೀಗಾಗಿ ಚಿತ್ರವು ಬಿಡುಗಡೆಯಾದ ಮೊದಲನೇ ದಿನವೇ ಭಾರೀ ಕಲೆಕ್ಷನ್​ ಮಾಡುವ ಸಾಧ್ಯತೆ ಇದೆ.

ಆದಿಪುರುಷ್​ ಟಿಕೆಟ್​ ಉಚಿತ: ಆದಿಪುರುಷ್​ ಚಿತ್ರವನ್ನು ಎಲ್ಲರೂ ನೋಡಬೇಕು ಎಂಬ ಉದ್ದೇಶದಿಂದ ಬಾಲಿವುಡ್​ ನಟ ರಣಬೀರ್​ ಕಪೂರ್ 10 ಸಾವಿರ ಟಿಕೆಟ್​ ಖರೀದಿಸಿದ್ದಾರೆ. ಆ ಟಿಕೆಟ್​ಗಳನ್ನು ಎನ್​ಜಿಒ ಸಂಸ್ಥೆಯ ಮೂಲಕ ಬಡ ಮಕ್ಕಳಿಗೆ ಕೊಡಲು ನಿರ್ಧರಿಸಿದ್ದಾರೆ. ರಣಬೀರ್​ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ​ಕಾರ್ತಿಕೇಯ-2 ಮತ್ತು ಕಾಶ್ಮೀರ ಫೈಲ್ಸ್ ಚಿತ್ರಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ 10,000 ಟಿಕೆಟ್ ಖರೀದಿಸಿದ್ದಾರೆ. ತೆಲಂಗಾಣದ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸೇರಿದವರಿಗೆ ಈ ಟಿಕೆಟ್‌ಗಳನ್ನು ಒದಗಿಸಲಾಗುತ್ತದೆ.

ಜೂನ್ 13 ರಂದು ಅಮೆರಿಕದಲ್ಲಿ ನಡೆಯಲಿರುವ ‘ಟ್ರಿಬೆಕಾ ಫೆಸ್ಟಿವಲ್’ನಲ್ಲಿ ‘ಆದಿಪುರುಷ್​’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಜೂನ್​ 16 ರಂದು ಹಿಂದಿ ಭಾಷೆಯಲ್ಲಿ ಸುಮಾರು 4000 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಹಿಂದಿ ಸೇರಿದಂತೆ ದೇಶಾದ್ಯಂತ 6,200 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ವಿದೇಶಗಳಲ್ಲಿ ಹಾಲಿವುಡ್​ ಸಿನಿಮಾಗಳಿಗೆ ‘ಆದಿಪುರುಷ್’ ತೀವ್ರ ಪೈಪೋಟಿ ನೀಡಲಿದೆ.​

ಪಂಚ ಭಾಷೆಯಲ್ಲಿ ಬಿಡುಗಡೆ: ‘ಆದಿಪುರುಷ್​’ ಸಿನಿಮಾವು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಪ್ರಭಾಸ್​ ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ, ಸನ್ನಿ ಸಿಂಗ್​ ಲಕ್ಷ್ಮಣನಾಗಿ ಮತ್ತು ಸೈಫ್​ ಅಲಿ ಖಾನ್​ ರಾವಣನಾಗಿ ನಟಿಸಿದ್ದಾರೆ. ಕಳೆದ ಮಂಗಳವಾರ ಚಿತ್ರದ ಪ್ರೀ ರಿಲೀಸ್​ ಈವೆಂಟ್​ ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆದಿತ್ತು.