‘ಆದಿಪುರುಷ್’.. ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಬಿಡುಗಡೆಗೂ ಮುನ್ನವೇ ‘ಆದಿಪುರುಷ್’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ ಕೆಜಿಎಫ್-2 ದಾಖಲೆಯನ್ನು ‘ಆದಿಪುರುಷ್’ ಹಿಂದಿಕ್ಕಿದೆ.
ಭೂಷಣ್ ಕುಮಾರ್ ನಿರ್ಮಾಣದ ಈ ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇದೇ 16 ರಂದು ಚಿತ್ರ ತೆರೆ ಕಾಣಲಿದೆ.
ಅದಕ್ಕೂ ಮುನ್ನವೇ ಆದಿಪುರುಷ್ ದೇಶ, ವಿದೇಶಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರತಂಡವೂ ಅಷ್ಟೇ ಅದ್ಧೂರಿಯಾಗಿ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದೆ. ಇದೀಗ ಆದಿಪುರುಷ್ ಟೀಮ್ ಭಾರತ ಸೇರಿದಂತೆ ವಿಶ್ವದಾದ್ಯಂತ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಯುನೈಟೆಡ್ ಸ್ಟೇಟ್ಸ್ (ಅಮೆರಿಕದಲ್ಲಿ) 187 ಸ್ಥಳಗಳಲ್ಲಿ ಒಟ್ಟು 10,727 ಟಿಕೆಟ್ಗಳನ್ನು ಮಾರಾಟ ಮಾಡಲಾಗಿದ್ದು, ಒಟ್ಟು ಕಲೆಕ್ಷನ್ ಸುಮಾರು 2 ಕೋಟಿಗಳಿಗೆ ತಲುಪಿದೆ. ಇದಲ್ಲದೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲೂ ‘ಆದಿಪುರುಷ್’ ಚಿತ್ರಕ್ಕೆ ಭರ್ಜರಿ ಪ್ರಿ-ರಿಲೀಸ್ ಕಲೆಕ್ಷನ್ ಸಿಕ್ಕಿದೆಯಂತೆ.
ಈ ದೇಶಗಳಲ್ಲಿ ‘ಕೆಜಿಎಫ್-2’ ದಾಖಲೆಗಳನ್ನು ‘ಆದಿಪುರುಷ್’ ಮುರಿದಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ ಜನಪ್ರಿಯ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ‘ಬುಕ್ ಮೈ ಶೋ’ಗೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಹೀಗಾಗಿ ಚಿತ್ರವು ಬಿಡುಗಡೆಯಾದ ಮೊದಲನೇ ದಿನವೇ ಭಾರೀ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ಆದಿಪುರುಷ್ ಟಿಕೆಟ್ ಉಚಿತ: ಆದಿಪುರುಷ್ ಚಿತ್ರವನ್ನು ಎಲ್ಲರೂ ನೋಡಬೇಕು ಎಂಬ ಉದ್ದೇಶದಿಂದ ಬಾಲಿವುಡ್ ನಟ ರಣಬೀರ್ ಕಪೂರ್ 10 ಸಾವಿರ ಟಿಕೆಟ್ ಖರೀದಿಸಿದ್ದಾರೆ. ಆ ಟಿಕೆಟ್ಗಳನ್ನು ಎನ್ಜಿಒ ಸಂಸ್ಥೆಯ ಮೂಲಕ ಬಡ ಮಕ್ಕಳಿಗೆ ಕೊಡಲು ನಿರ್ಧರಿಸಿದ್ದಾರೆ. ರಣಬೀರ್ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ತಿಕೇಯ-2 ಮತ್ತು ಕಾಶ್ಮೀರ ಫೈಲ್ಸ್ ಚಿತ್ರಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ 10,000 ಟಿಕೆಟ್ ಖರೀದಿಸಿದ್ದಾರೆ. ತೆಲಂಗಾಣದ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸೇರಿದವರಿಗೆ ಈ ಟಿಕೆಟ್ಗಳನ್ನು ಒದಗಿಸಲಾಗುತ್ತದೆ.
ಜೂನ್ 13 ರಂದು ಅಮೆರಿಕದಲ್ಲಿ ನಡೆಯಲಿರುವ ‘ಟ್ರಿಬೆಕಾ ಫೆಸ್ಟಿವಲ್’ನಲ್ಲಿ ‘ಆದಿಪುರುಷ್’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಜೂನ್ 16 ರಂದು ಹಿಂದಿ ಭಾಷೆಯಲ್ಲಿ ಸುಮಾರು 4000 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಹಿಂದಿ ಸೇರಿದಂತೆ ದೇಶಾದ್ಯಂತ 6,200 ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ವಿದೇಶಗಳಲ್ಲಿ ಹಾಲಿವುಡ್ ಸಿನಿಮಾಗಳಿಗೆ ‘ಆದಿಪುರುಷ್’ ತೀವ್ರ ಪೈಪೋಟಿ ನೀಡಲಿದೆ.
ಪಂಚ ಭಾಷೆಯಲ್ಲಿ ಬಿಡುಗಡೆ: ‘ಆದಿಪುರುಷ್’ ಸಿನಿಮಾವು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಕಳೆದ ಮಂಗಳವಾರ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆದಿತ್ತು.